Friday, January 8, 2010

------------------:ತಾಳ ತಪ್ಪಿದ ಪ್ರೇಮ ರಾಗ :-------------------


ನಿಮಗಿದನ್ನು ಹೇಗೆ ಹೇಳಬೇಕೆಂಬುದೇ ತಿಳಿಯುತ್ತಿಲ್ಲ...
ಕಥೆಯಾದರೆ ಹೇಗೋ ಆದಿಯ ಎಳೆಯನ್ನು ಎಳೆದು ತಂದು ಶುರು ಮಾಡಬಹುದಾಗಿತ್ತು.. ಆದರೆ ಈ ಘಟನೆ ನಡೆದದ್ದು ಮಾತ್ರ ನನ್ನ ಕಣ್ಣ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ.. ಪ್ರತಿಯೊಬ್ಬರ ಬದುಕಿನಲ್ಲೂ ಭವಿಷ್ಯದ ಭವಿತವ್ಯಕ್ಕೆ ನಾಂದಿ ಹಾಡುವ ಪ್ರಮುಖ ಘಟ್ಟಗಳಲ್ಲಿ ಜೀವನ ಸಂಗಾತಿಯ ಆಯ್ಕೆಯೂ ಒಂದು. ನಾವೆಲ್ಲರೂ ಕೂಡ ಈ ಕಾಲಘಟ್ಟಕ್ಕೆ ಹತ್ತಿರವಾಗಿದ್ದೇವೆ ಅಥವಾ ಈಗ ತಾನೆ ಆ ಘಟ್ಟವನ್ನು ದಾಟಿ ಬಂದಿದ್ದೇವೆ, ನಿಮ್ಮೆಲ್ಲರಂತೆ ನನ್ನಲ್ಲಿಯೂ ಹುಡುಗಿಯೊಬ್ಬಳು ನನ್ನ ಮನಸ್ಸನ್ನು ಸೆಳೆದಾಗ ಮೂಡಿದ ಪುರುಷ ಸಹಜ ಕಾಮನೆಗಳು, ತಳಮಳಗಳು, ಪರಿಣಾಮಗಳು, ಕಂಪನಗಳಿವು,

ಹೌದು ... ನಮ್ಮಿಬ್ಬರ ಭೇಟಿಯೂ ಹಾಗೆ ಆಗಿದ್ದು, ನೀವಿದನ್ನು ಪ್ರೇಮಪುಸ್ತಕಗಳಲ್ಲಿ ರೂಪಿಸಿರುವ ಕಥೆಯೆನ್ನಿ,ಸಾವಿರಾರು ಚಿತ್ರಗಳಲ್ಲಿ ಬಂದಿರುವ ದೃಶ್ಯದಷ್ಟು ಸಿನಿಮೀಯವೆನ್ನಿ, ನಾಟಕೀಯವೆನ್ನಿ, ನನ್ನದೇನೂ ಅಭ್ಯಂತರವಿಲ್ಲ. ಈ ವಾಸ್ತವ ಜೀವನದಲ್ಲಿ ನಡೆದ ಪ್ರೇಮಕಥೆಯ ತಿರುಳನ್ನು ವೈಯಕ್ತಿಕ ವೆಂದೆನಿಸಿದರೂ ನನ್ನ ಬರವಣಿಗೆಯ ತೃಶೆ ತೀರಿಸಿಕೊಳ್ಳಲು ನಿಮ್ಮ ಮುಂದೆ ಇಡುತ್ತಿದ್ದೇನೆ.

ಎಂದಿನಂತೆ ಬೆಳಗಿನ ನನ್ನ ಕರ್ಮವಿಧಿಗಳನ್ನು ಅವಸರವಸರವಾಗಿ ಮುಗಿಸಿ ಸರಿಯಾಗಿ ಕ್ಯಾಬ್ ಬರುವ ಹೊತ್ತಿಗೆ ನಾನು ನನ್ನ ಸ್ಟಾಪ್ ನಲ್ಲಿ ಕಾಯುತ್ತಿದ್ದೆ. ನಾನಿರುವ ಪ್ರದೇಶವಿನ್ನೂ ಅಷ್ಟು ವಾಹನ/ಜನಸಾಂದ್ರತೆಯಿಂದ ಕೂಡಿಲ್ಲವಾದ್ದರಿಂದ ನನಗೆ ಬೆಳಗಿನ ಹಕ್ಕಿಗಳ ಚಿಲಿಪಿಲಿ ಕಿವಿಗೆ ಬೀಳುತ್ತಿರುತ್ತದೆ, ಅದೂ ಎದುರಿಗಿರುವ ಉದ್ಯಾನವನದ ಕೃಪಾಕಟಾಕ್ಷದಿಂದ, ಪಾರ್ಕ್ ಮೇಲೆ ಹಾದುಹೋಗಿರುವ ತೀವ್ರ ವಿದ್ಯುತ್ ವಾಹಕದ ತಂತಿಯ ಮೇಲೆ ಕೆಲವೊಂದು ಹಕ್ಕಿಗಳು ಕುಳಿತು ತಮ್ಮ ಕಂಠಸಿರಿಯಿಂದ ದಾರಿಹೋಕರನ್ನು ಸಂತೃಪ್ತಿ ಗೊಳಿಸುತ್ತಿರುತ್ತವೆ. ಉದ್ಯಾನವನದಲ್ಲಿ ಮಾತ್ರ ವಾಕಿಂಗ್, ಜಾಗಿಂಗ್, ನಡದೇ ಇತ್ತು, ವಯಸ್ಕರರಿಗಿಂತ ಯುವಕರ ದಂಡು ಜೋರಾಗೇ ಇರುತ್ತದೆ, ದಿನಪೂರ್ತಿ ತಿನ್ನಬಾರದ್ದನ್ನು ತಿಂದು ಹೊಟ್ಟೆಗೆ ಶಿಕ್ಷೆ ಕೊಟ್ಟು ಬೆಳಗ್ಗೆ ಅದನ್ನು ಕರಗಿಸಲು ಅವರು ಕಂಡುಕೊಂಡ ಪರಿಹಾರ ಮಾರ್ನಿಂಗ್ ವಾಕ್. ಒಟ್ಟಿನಲ್ಲಿ ಬೆಂಗಳೂರಿಗನಾಗಿ ಹೇಳಬೇಕೆಂದರೆ ಅದೊಂದು ನನಗೆ ಕಣ್-ಮನ ಸೆಳೆಯುವ ದೃಶ್ಯ.

ಅದೇ ಹಕ್ಕಿಗಳ ಗಾನವಾಣಿಯತ್ತ ಚಿತ್ತ ನೆಟ್ಟು ಒಮ್ಮುಖವಾಗಿ ಪಾರ್ಕ್ ವರೆಗೂ ಚಲಿಸಿ ಒಮ್ಮೆಲೇ ತಿರುಗಿದೆ, ಓಹ್.... ಮನಸು ಒಮ್ಮೆಲೇ ಆದ ಬದಲಾವಣೆಯನ್ನು ಗುರುತಿಸಿತು, ಮೆದುಳು ಗ್ರಹಿಸಿ ಕಣ್ಣಿಗೆ ಸಂದೇಶ ಕಳಿಸುವ ಮೊದಲೇ ನನ್ನೆರಡೂ ನಯನಗಳು ಆಗಲೇ ಅತ್ತ ದೃಷ್ಟಿನೆಟ್ಟಿದ್ದವು, ದಾರಿಯಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ತನ್ನ ಕೈಯನ್ನೊಮ್ಮೆ ಚಾಚಿ ಗಡಿಯಾರದತ್ತ ಒಮ್ಮೆ ಕಣ್ಣು ಹಾಯಿಸಿ, ದಾರಿಯಲ್ಲಿ ಬರುತ್ತಿರುವ ವಾಹನಗಳನ್ನು ನೋಡಿದಾಗ ನನಗೆ ಸ್ಪಷ್ಟವಾಯಿತು. ಇವಳೂ ಕೂಡ ನನ್ನಂತೆಯೇ ಕ್ಯಾಬ್ ಗಾಗಿ ಕಾಯುತ್ತಿದ್ದಾಳೆ ತೀವ್ರ ಕುತೂಹಲಗೊಂಡ ನನ್ನ ಮನಸ್ಸು ಅವಳ ಒಂದು ಚಲನವಲನದಿಂದ ಉತ್ತರ ಹುಡುಕಿಕೊಂಡಿತು, ಆದರೆ ಸಾವಿರ ಪ್ರಶ್ನೆಗಳು ತೆರೆದುಕೊಂಡವು. ಯಾರೀ ಮದನಾರಿ ? ಯಾವ ಕಂಪನಿ ? ಯಾವ ಊರು ?.....ಹೀಗೆ, ಇನ್ನು ನನ್ನ ಮನಸ್ಸು ಪ್ರಶ್ನೆ ಕೇಳುತ್ತಿರುವಾಗಲೇ ಅವಳ ಕ್ಯಾಬ್ ಬಂದೇ ಬಿಟ್ಟಿತು ಸಹಜ ಕುತೂಹಲದಿಂದ ಕಂಪನಿ ತಿಳಿದುಕೊಳ್ಳಲು ಕ್ಯಾಬ್-ನತ್ತ ಕಣ್ಣು ಹಾಯಿಸಿದೆ ಎದುರುಗಡೆ "ಪೂರ್ಣಸೇವಾ ಐ ಟಿ ಸೊಲೂಷನ್ಸ್" ಎಂದು ಬರೆದಿತ್ತು. ಒಹೋ... ಇವಳು ಐ.ಟಿ. ಹಕ್ಕಿ ಯೆಂದು ತಿಳಿಯಿತು. ಇನ್ನೂ ಯೋಚನೆಗೆ ಅವಕಾಶ ಕೊಡದೇ ನನ್ನ ಕ್ಯಾಬ್ ಕೂಡ ಬಂತು, ಬಂಡಿಯನೇರಿ ಹೊರಟೆ.

ಆಫೀಸಿನತ್ತ ಮುಖ ಮಾಡಿ ಚಲಿಸುತ್ತಿದ್ದ ಕ್ಯಾಬ್ ನಲ್ಲಿ ನನ್ನ ಮನಸ್ಸು ಮಾತ್ರ ಎತ್ತೆತ್ತಲೋ ಚಲಿಸಹತ್ತಿತು, ನನ್ನಲ್ಲಿ ಅವಳ ಬಗ್ಗೆ ಯಾವುದೇ ವಿಶೇಷ ಒಲವಾಗಲೀ, ಒಲುಮೆಯಾಗಲೀ ಹೊಮ್ಮಿಬರಲಿಲ್ಲ. ಒಂದೇ ನೋಟಕ್ಕೆ ಹಾಗಯಿತೆನ್ನುವುದು ಕೂಡ ತೀವ್ರ ಹಾಸ್ಯಸ್ಪದವಾದೀತು. ಆದರೆ ಅವಳೆಡೆಗಿನ ನನ್ನ ನೋಟ ಮಾತ್ರ, ನನ್ನ ಮನಸ್ಸಿನ ಚಿಂತನಾ ಲಹರಿಯನ್ನು ಸ್ಥಿತ್ಯಂತರಗೊಳಿಸಿತು. ಮನಸ್ಸು ಇತ್ತೀಚಿನ ಬೆಳವಣಿಗೆಗಳನ್ನು ತುಂಬಾ ಹಚ್ಚಿಕೊಳ್ಳುತಾದಾದ್ದರಿಂದ ನನ್ನೇಡೆಗಿನ ಅವಳ ಕುರಿತಾದ ಯೋಚನೆ ತೀರ ಸ್ವಾಭಾವಿಕವಾದದ್ದೇ ಎನ್ನಿ. ಹಾಗಾದರೆ ಅವಳೆನೂ ಅಂತಹ ಚೆಲುವೆಯೇ ? ಅದೊಂದು ಚೆಲುವು ನನ್ನನ್ನು ಹೀಗೆ ಮಾಡಿತೆ ? ಸಾಧ್ಯವೇ ಇಲ್ಲ.. ಯಾಕೆಂದರೆ ಸಾಮಾನ್ಯವಾಗಿ ಎಲ್ಲ ಹುಡುಗರಂತೆ ಚೆಲುವು, ರೂಪರಾಶಿ, ಮೈಮಾಟ ಊಹುಂ... ಇದಾವುದನ್ನೂ ನಾನು ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಹಾಗಾದರೆ ನಿನ್ನವಳ ಆಯ್ಕೆಗೆ ನಿನ್ನ ಮಾನದಂಡವೇನು ? ಎಂದು ನೀವು ಕೇಳಬಹುದು, ನನ್ನವಳ ಆನ್ವೇಷಣೆ ನಿರಂತರವಾಗಿ ನನ್ನೊಳಗೇ ಸಾಗಿದೆಯಾದರೂ ಅದಿನ್ನೂ ತೀವ್ರಸ್ವರೂಪ ಪಡೆದುಕೋಂಡಿಲ್ಲ, ಪ್ರೀತಿಸಿದ ಮದುವೆಯೆಂದರೆ ಕೇವಲ ಎರಡು ಮನಸ್ಸುಗಳು ಮಾತ್ರ ಇಷ್ಟಪಟ್ಟು, ಜಗತ್ತಿನ ಮಾತನ್ನು ಧಿಕ್ಕರಿಸಿ ತಮ್ಮಿಬ್ಬರ ಜಗತ್ತನ್ನು ಮಾತ್ರ ಸೃಷ್ಟಿಸಿಕೊಳ್ಳುವುದು. ಅದು ನನಗೆ ಇಷ್ಟವಿಲ್ಲ, ಮದುವೆಯೆಂಬುದು ಎರಡು ಕುಟುಂಬಗಳು ಸಂಪೂರ್ಣವಾಗಿ ಒಪ್ಪಿ, ಸಮಾಜಕ್ಕೆ ತಮ್ಮ ಅಧಿಕೃತತೆಯನ್ನು ತೋರಿಸುವ ಸಲುವಾಗಿ ತಮ್ಮ ಕಡೆಯ ಕುಲಬಾಂಧವರನ್ನು ಕರೆಸಿ ಎಲ್ಲರೂ ಒಂದಾಗಿ ಮಾಡುವ ಒಂದು ಪವಿತ್ರವಾದ ಕೆಲಸ. ಇನ್ನು ಮೂಲತಹ ಭಾವುಕ ಜೀವಿಯಾದ ನಾನು ಮದುವೆಯಂತಹ ಘಳಿಗೆಗಳನ್ನು ಮನೆಯರನ್ನು/ಸಮಾಜವನ್ನು ಧಿಕ್ಕರಿಸಿಯಾದರೂ ವರಿಸಿಕೊಳ್ಳುತ್ತೇನೆ ಎನ್ನುವ ನಂಬಿಕೆ ನನಗಂತೂ ಮೊದಲೇ ಇಲ್ಲ. ಅದೇ ಕಾರಣಕ್ಕೆ ಹುಡುಗಿಯರೆಡೆಗಿನ ನನ್ನ ಆಲಸ್ಯ ಸ್ವಲ್ಪ ಜೋರಾಗೆ ನನ್ನಲ್ಲಿ ಮನೆಮಾಡಿದೆ. ಮತ್ತು ಕೆಲವರು ಪ್ರೀತಿ ಹೆಸರನ್ನು "ಇನ್ನಿತರ" ಕೆಲಸಗಳಿಗಾಗಿ ಉಪಯೋಗಿಸುತ್ತಿದ್ದುದು ಕೂಡ ಸಹಜವಾಗಿ ಪ್ರೀತಿ/ಪ್ರೇಮ ದೆಡೆಗೆ ನನ್ನ ಸಾತ್ವಿಕ ಕೋಪ ಮನದ ಮೂಲೆಯಲ್ಲಿ ಆಳವಾಗಿ ಬೇರೂರಿದೆ. ಹೆತ್ತವರು/ಮನೆ/ಬಂಧು/ಬಳಗ ಗಳಿಂದ ಮುಕ್ತರಾಗಿ ಕೇವಲ ಪ್ರಿಯತಮೆಯ ಸೆರಗಿನ ಹಿಂದೆ ಅಡಗಿಕೊಳ್ಳುವುದು ನನಗೆ ಪ್ರೀತಿಸದವರೆಡೆಗೆ ಮುಜುಗರ ತರುತ್ತದೆ.

ಇಷ್ಟೆಲ್ಲ ಯೋಚನೆಗಳನ್ನು ಅದೂ ಹುಡುಗಿಯರ ಬಗ್ಗೆ ನಾನು ಕನಸಿನಲ್ಲಿಯೂ ಮಾಡಿರಲಿಲ್ಲ, ಇಂದು ಉದ್ಭವಿಸಿದ ಈ ಪ್ರತ್ಯಕ್ಷ ದೇವತೆಯ ಪ್ರಭಾವದಿಂದ ಮನಸ್ಸು ಅಕಸ್ಮಾತ್ ಆಗಿ ಈ ವಿಷಯವನ್ನು ತೆಗೆದುಕೊಂಡಿತ್ತು, ಹಾಗಾದರೆ ಇವಳೇನು ಅಷ್ಟೊಂದು ಅಪೂರ್ವ ಸುಂದರಿಯೆ? ಎಂದು ನೀವು ಕೇಳಬಹುದು? ಉಪಮಾನ ಉಪಮೇಯಗಳನ್ನಿಟ್ಟು ಹೊಗಳುವಂತವಳಾಗಲೀ, ಕವಿಗೆ ಕಾವ್ಯ ರಚಿಸುವಂತಹ ಸ್ಪೂರ್ತಿಯಾಗಲೀ, ಕಾಲವನ್ನು ಚಲಿಸದೇ ನಿಲ್ಲಿಸುವ ಸೌಂದರ್ಯವಾಗಲೀ, ಇದೆ ಎಂದು ನಾನು ಹೇಳಲಾರೆ. ರಂಭೆ/ಊರ್ವಶಿ/ಮೇನಕೆಯರ ಚೆಲುವನ್ನು ಅರೆದು, ಬಸಿದು ಕುಡಿದು ಬಂದ ಭೂಲೋಕದ ತಿಲೋತ್ತಮೆಯೆ ಎನ್ನಲಾರೆ. ಆದರೆ ಮೊದಲ ನೋಟಕ್ಕೇ ಒಂದು ಹೆಣ್ಣು ಬಹುಕಾಲ ನನ್ನ ಮನಸ್ಸನ್ನು ಸೆರೆಹಿಡಿದಿದ್ದಳು ಅಷ್ಟೆ.

ಯಾವುದೇ ನಿರ್ದಿಷ್ಟ ಬಯಕೆಗಳಿಲ್ಲದೇ ನಮ್ಮಿಬ್ಬರ ಅನಾಮಿಕ ಮಿಲನಕ್ಕೆ ವೇದಿಕೆ ಹಾಕಿದ್ದು ಆ ರಸ್ತೆ, ಒಂದು ಬದಿಯಲ್ಲಿ ನಾನು, ಇನ್ನೊಂದು ಬದಿಯಲ್ಲಿ ಅವಳು, ಮೊದಲ ನೋಟಕ್ಕೆ ಬಿಟ್ಟರೆ ನನ್ನನ್ನು ಯಾವಗಲೂ ಅಷ್ಟು ಕಾಡಿಸಿದ್ದಿಲ್ಲ. ಆಕಸ್ಮಿಕವಾಗಿ ನನ್ನತ್ತ ನೋಟ ಹರಿಸಿದರೂ, ನಾನು ನೋಡುವಷ್ಟರಲ್ಲಿ ಅವಳ ನೋಟ ಬೇರೆಡೆಗೆ ತಿರುಗುತ್ತಿತ್ತು. ಸುಮಾರು ಎರಡು ವಾರಗಳ ಕಾಲ ನಮ್ಮದು ಹೀಗೆ ಸಾಗಿತ್ತು.

ಯಾವಾಗಲೂ ಅವಳ ಕ್ಯಾಬ್ ನನಗಿಂತ ಸುಮಾರು ೨ ನಿಮಿಷ ಬೇಗ ಬರುತ್ತಿತ್ತು, ಹೀಗಾಗಿ ವೀಕೆಂಡ್ ಬಿಟ್ಟರೆ ಪ್ರತಿದಿನ ನಮ್ಮ ಭೆಟಿಯಾಗುತ್ತಿತ್ತು, ಅದೊಂದು ದಿನ ಅವಳಿಗಿಂತ ಮೊದಲೇ ಅವಳ ಕ್ಯಾಬ್ ಬಂದುಬಿಟ್ಟಿತ್ತು ಸರಿ ಡ್ರೈವರ್ ೧೦ ಸೆಕೆಂಡ್ ಕಾದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ತಿರುವಿನಿಂದ ಅವಳು ಓಡಿಬರುತ್ತಿರುವುದು ಕಂಡಿತು. ಅಷ್ಟೇ ನನ್ನೊಳಗಿರುವ ಮಹಿಳೆಯರ ಬಗೆಗಿನ ಪುರುಷ ಸಹಜ ಸಹಾಯ ಪ್ರಜ್ನೆ ಎಚ್ಚೆತ್ತುಕೊಂಡಿತು ಎಂದು ಕಾಣುತ್ತದೆ, ಕೂಡಲೇ ಜೋರಾಗಿ ಕೂಗಿ ಡ್ರೈವರ್ ಗೆ ನಿಲ್ಲಿಸುವಂತೆ ಸೂಚಿಸಿ ಅವಳೆಡೆಗೆ ಕೈ ಮಾಡಿ ತೋರಿಸಿದೆ, ಕ್ಯಾಬ್ ನಿಂತುದಕ್ಕಾಗಿ ನಿಟ್ಟುಸಿರು ಬಿಡುತ್ತಾ ಮತ್ತು ಅದಕ್ಕೆ ಸಹಾಯ ಮಾಡಿದ ನನ್ನೆಡೆಗೆ ತಿರುಗಿ ತೇಕು ತುಂಬಿದ ಮಂದಹಾಸ ಬೀರಿದಳು ... ಅಷ್ಟೆ ನನ್ನ ಮುಖ ನನಗೇ ಗೊತ್ತಿಲ್ಲದಂತೆ ಮಂದಸ್ಮಿತವಾಯಿತು..ನನ್ನೆಡಿಗಿನ ಅವಳ ಆ ಕೃತಜ್ನತೆ ತುಂಬಿದ ನೋಟದಿಂದ ನನ್ನೊಳಗಿರುವ "ಪರಜನಹಿತ ಕಲ್ಯಾಣಾಧಿಕಾರಿ" ಸಂತೃಪ್ತಗೊಂಡಿದ್ದ.

ಸರಿಯಾಗಿ ನಾಳೆಗಳ ಬಗ್ಗೆ ಯೋಚನೆ ಮಾಡದ ನಾನು. ನಾಳೆಗಳನ್ನು ಕಾತುರದಿಂದ ಕಾಯುವಂತಾಯ್ತು. ನನ್ನ ಕ್ಯಾಬ್ ಬರುವ ಸ್ಥಳಕ್ಕೆ ಹೋಗಿ ನಿಂತ ಮೇಲೆ ಕಣ್ಣು ಕ್ಷಣಕ್ಕೊಮ್ಮೆಯಾದರೂ ಮೆದುಳಿನ ಸಂದೇಶವನ್ನು ಧಿಕ್ಕರಿಸಿಯಾದರೂ ಆ ಕಡೆಗೊಮ್ಮೆ ಕಣ್ಣು ಹಾಯಿಸುತ್ತಿತ್ತು. ನನ್ನ ವ್ಯಕ್ತಿತ್ವದಲ್ಲಿ ದಿಢೀರೆಂದು ಉದ್ಭವಿಸಿದ ಈ ಬದಲಾವಣೆ ನನಗೇ ನಂಬಲಸಾಧ್ಯವಾಗಿತ್ತು, ನನ್ನ ಅಂತರಂಗ ಮತ್ತು ಬಹಿರಂಗ ಗಳೆರಡೂ ಮೊದಲ ಸಾರಿ ಬಹಿರಂಗವಾಗಿಯೇ ಭಿನ್ನ ರಾಗ ಹಾಡಿದ್ದವು, ಏಕಾಂತದಲ್ಲಿದ್ದಾಗ ನನ್ನ ಸುಪ್ತಮನಸ್ಸು "ಎಲಾ ಕಪಟಿಯೇ.. ತೋರಿಸಿಬಿಟ್ಟೆಯಲ್ಲವೋ ಎಲ್ಲಾ ಗಂಡಸು ಸಹಜವಾದ ಎಂಜಲು ಬುದ್ಧಿಯನ್ನಾ... ಅವಳೇನೋ ಸಿಕ್ಕಳಂತೆ ನೋಡಿ ನಕ್ಕಳಂತೆ .. ಇವನಿಗೆ ಅದೇನೋ ಆಯಿತಂತೆ. ಚೆನ್ನಾಗಿದೆ ಎಷ್ಟೇ ಆದರೂ ವಾರಕ್ಕೆರೆಡು ಚಲನಚಿತ್ರ ನೋಡುತ್ತಿಯಲ್ಲಾ ಎಲ್ಲಿ ಹೋದೀತು ಆ ಸಿನಿಮೀಯ ಶೈಲಿ ಅದಕ್ಕೆ ಹಾಗೆ ಹೇಳಿದ್ದೀಯ ಮಗನೇ. ಸಿಕ್ಕ ಸಿಕ್ಕವರ ಹತ್ತಿರ ಪ್ರೀತಿಯೆಡೆ ತೋರಿಸುವ ಅನಾದರವೇನು.. ಪ್ರೇಮ ಪಾಶದಲ್ಲಿ ಬಿದ್ದ ಗೆಳೆಯರಿಗೆ ನಿನ್ನಿಂದ ಉಪದೇಶವೇನು ? ಪ್ರೀತಿಯ ಪರಿಣಾಮಗಳನ್ನು ಅವರಿಗೆ ವಿವರಿಸುವ ಪರಿಯೇನು ? ಆಹಾ ... ಹೇಳೋದ್ ಆಚಾರ ತಿನ್ನೊದ್ ಮಾತ್ರ ಬದನೇಕಾಯಿ. ಊಸರಿವಳ್ಳಿಯ ಕುಲದ ಕುಲಜ ಕಣೋ ನೀನು. ನಿನ್ನ ಪ್ರತಿ ಕಾರ್ಯಕ್ಕೂ ವೈಚಾರಿಕ ಬೆಂಬಲ ಕೊಡುತ್ತ ಬಂದೆ ನೋಡು ನಾನು ಹೊಡ್ಕೋಬೇಕು ಮೊದ್ಲು.. ಆಳದ ಅರಿವೇ ಇಲ್ಲದೇ ತೋಡಿ ಇಟ್ಟಿರುವ ಗುಂಡಿಯಲ್ಲಿ ಬೀಳಬೇಡ..ಕಾಡಿನೊಳು ಠೇಂಕರಿಸುವ ಗಜರಾಜನಂತಿರುವ ನೀನು ಹೆಣ್ಣೆಂಬ ಮಾಯೆಯ ಬಿಲದಲ್ಲಿ ಬಿದ್ದರೆ ನಾಡಿನಲ್ಲಿ ಮಾವುತನ ಆಣತಿಯಂತೆ ನಡೆಯುವ ಆನೆಯಾಗುತ್ತೀ.. ನೀರಿನಲ್ಲಿ ಮೀನಿನ ಜಾಡು ಹಿಡಿಯುವ ಕೆಲಸ ಮಾಡಬೇಡಲೋ.. ಆರಂಭ ಮಾತ್ರ ನಿನ್ನ ಕೈಲಿರುತ್ತೆ ಕಣೋ ಆದರೆ ಪರಿಣಾಮ ಮಾತ್ರ ನಿನ್ನ ಕೈಲಿಲ್ಲ .. ಲೋ..ಲೋ ಹೆಣ್ಣು ಕಣೋ ಅದು ಹೆಣ್ಣೂ. ಮೂಲ ಹುಡುಕಲು ಹೋಗಿ ಋಷಿಮುನಿಗಳು ಸೋತರು, ತಪಸ್ವಿಗಳು ತಪಭೋಗ ತೊರೆದರು, ಸಾಮ್ರಾಜ್ಯಗಳು ಅಳಿದವು, ಪಟ್ಟದರಸರೆಲ್ಲ ಪುಟಗೋಸಿ ಹೆಣ್ಣಿನ ಹಿಂದೆ ಹೋಗಿ ಪಟ್ಟ ತೊರೆದರು, ತಲೆಗಳೆಲ್ಲ ತರಗೆಲೆಗಳಂತೆ ಉರುಳಿದವು ಅದರಲ್ಲಿ ನೀನ್ಯಾವ ದೊಣ್ಣೆನಾಯಕನಯ್ಯಾ ?..ಬಿಟ್ಟು ಬಿಡು, ಹೊಸಕಿ ಹಾಕಿಬಿಡು ತಲೆಯಲ್ಲೆದ್ದಿರುವ ಆ ಗುಂಗಿ ಹುಳವನ್ನ " ನನ್ನೊಳಗೆ ಉಂಟಾಗಿರುವ ಈ ಕಂಪನಕ್ಕೆ ನಿರ್ದಿಷ್ಟ ಹೆಸರನ್ನಿಡಲು ಹೊಯ್ದಾಡುತ್ತಿದ್ದಾಗ ನನ್ನ ಒಳಮನಸ್ಸು ಹೇಳಿದ್ದನ್ನು ಕೇಳಿ ಹಾಗಾದರೆ ಇದು ಪ್ರೀತಿಯೇ ಎಂದು ನಿರ್ಧಾರಕ್ಕೆ ಬಂದೆ. ನಿರ್ಧಾರದಲ್ಲಿ ಸ್ವಲ್ಪವೂ ಅಳುಕಿರಲಿಲ್ಲ ಬದಲಾಗಿ ನಿಶ್ಚಯವಿತ್ತು.


ಹೌದು ದೃಢ ನಿಶ್ಚಯವಿತ್ತು.. ಯಾರೋ ದಾರಿಯಲ್ಲಿ ಎಡವಿ ಬಿದ್ದರೆ ದಾರಿಯನ್ನು ಶಪಿಸಲಾದೀತೆ ? ಯಾರೋ ಪ್ರೇಮವನ್ನು ಸ್ವಾರ್ಥಕ್ಕಾಗಿ ಬಳಸಿದರೆ ಪ್ರೀತಿಯನ್ನೇ ಹೀಗೆಳೆಯುವುದೇ ? ಸಂಕುಚಿತ ಮನಸ್ಸುಗಳು. ಮೋಹಗೊಂಡ ಮನಸ್ಸು ಒಲಿದ ಜೀವವನ್ನು ಬಯಸುವುದು ತಪ್ಪೇ ? ಇದೇ ಪ್ರೀತಿಯಲ್ಲವೇ ? ಅರಿಷಡ್ವರ್ಗಗಳಲ್ಲಿ ಕಾಮ, ಕ್ರೋಧ, ಲೋಭ, ಮದ, ಮತ್ಸರಗಳನ್ನು ಜೀವನದ ಭಾಗವೆಂದು ಒಪ್ಪಿಕೊಳ್ಳುವ ನಾವು "ಮೋಹ"ದ ವಿಚಾರದಲ್ಲೇಕೆ ಅಸ್ಪೃಷ್ಯರಂತೆ ವರ್ತಿಸುತ್ತೇವೆ ? ಜಗದ ಜೀವಸಂಕುಲದಲ್ಲಿ ಉಚ್ರಾಃಯ ಸ್ಥಿತಿಯಲ್ಲಿರಬೇಕಾದ ಪ್ರೀತಿಯನ್ನು ನಿಕೃಷ್ಟವಾಗಿ ನೋಡುತ್ತಿರುವ ಮಾನವಸಂಕುಲದ ಆಶಾಢಭೂತಿತನದ ಬಗ್ಗೆ ಜಿಗೂಪ್ಸೆ ಬಂದಿತು ನನಗೆ.

ಜಗತ್ತಿನ ಯಾವ ವಸ್ತುವಿಗೆ ಪ್ರೀತಿಗೆ ಇರಬೇಕಾದ ಶಕ್ತಿ ಇದೆ ? ಪ್ರೀತಿಯೆಂಬ ಜೀವ ಜಲವನ್ನು ಜಗತ್ತು ಕುಡಿದಿದ್ದೇ ಆದಲ್ಲಿ ಅಸೂಯೆ, ಮೇಲು, ಕೀಳು, ಬಡವ, ಬಲ್ಲಿದ, ಕೋಮು ದಳ್ಳುರಿ ಎಲ್ಲವೂ ನಿರ್ನಾಮ ವಾಗುತ್ತವೆ. ಮಾನವ ನಿರ್ಮಿತ ಡಂಭಾಚಾರದ ಸಂಪ್ರದಾಯಗಳನ್ನು ಕಿತ್ತೊಗೆಯಲು ಮತ್ತು ಜಾತಿಯೆಂಬ ಪೆಡಂಭೂತವನ್ನು ಬೇರುಸಹಿತ ನಾಮಾವಶೇಷ ಗೊಳಿಸುವ ಪಳಯುಳಿಕೆಯೇನಾದರೂ ಇದ್ದರೆ ಅದು ನಿಸ್ಸಂಶಯವಾಗಿಯೂ ಪ್ರೀತಿ ಮಾತ್ರ. ದ್ವೇಷದಿಂದ ದ್ವೇಷ ಹೆಚ್ಚಾಗುತ್ತದೆ ಆದರೆ ಪ್ರೀತಿಯಿಂದ ದ್ವೇಷ ಕರಗುತ್ತದೆ, ಮನಸ್ಸುಗಳು ಮುದವಾಗುತ್ತವೆ. ಒಂದು ಜೀವವನ್ನು ಇನ್ನೊಂದು ಜೀವ ಅರಿಯುವುದರಲ್ಲೇ ಜೀವನದ ಸಾರ್ಥಕತೆ ಇರುವುದು. ಆ ಸಾರ್ಥಕತೆಯ ಸಾಧನೆಗೆ ಪ್ರೀತಿಯೇ ಸೇತುವೆ. ದ್ವೇಷ ದಿಂದ ಮನಸ್ಸು ಕೆರಳಿದರೆ ಪ್ರೀತಿಯಿಂದ ಮನಸ್ಸು ಅರಳುತ್ತದೆ, ಈ ಅರಳುವ ಮನಸ್ಸುಗಳೇ ಜಗತ್ತಿಗೇ ಬೇಕಾಗಿರುವುದು. ಪ್ರೀತಿಯಿಂದ ಜಾತಿಯನ್ನೂ ಜಗತ್ತನ್ನೂ ಗೆಲ್ಲಬೇಕೇ ವಿನಹ ಜಾತಿಗಾಗಿ ಪ್ರೀತಿಯನ್ನು ಬಲಿಕೊಡಬಾರದು... ಹೀಗೆ ಸಾಗಿತ್ತು ನನ್ನ ಮಾತು.. ನಾನೇನೋ ಜಗತ್ ಕಲ್ಯಾಣಕ್ಕಾಗಿಯೇ ಪ್ರೀತಿಸುತ್ತಿದ್ದೇನೆ ಎನ್ನುವವನ ತರ..

ಹಾಗಾದರೆ ನನಗೆ ಇವಳು ಸರಿಹೊಂದಬಹುದೇ ? ನನ್ನ ಕಲ್ಪನೆಯ ಕಾಡ ಬೆಳದಿಂಗಳ ಮಲ್ಲಿಗೆ, ಕಾನನದ ಕೆಂಡ ಸಂಪಿಗೆ ಎಲ್ಲಾ ಇವಳೇನಾ ??? ಮನಸು ಸರಿಯಾಗಿ ಇನ್ನೂ ಪ್ರೇಮವೇದನೆಯಿಂದ ಹೊರಬಂದಿರಲಿಲ್ಲ ಆಗಲೇ ಬಲವಂತವಾಗಿ ವಾಸ್ತವವೆಂಬ ನಿಜಜೀವನದ ಸೇನಾಧಿಪತಿ ಎಚ್ಚರಗೊಳಿಸಿದ. ಸಾಕು ಭ್ರಮಾಲೋಕದ ನಷೆ.. ಸ್ವಲ್ಪ ವಾಸ್ತವದ ಚೌಕಟ್ಟಿನಲ್ಲಿ ಯೋಚಿಸಿ ನೋಡು.

ನನ್ನ ಪ್ರೇಮವಿವಾಹದ ದೊಡ್ಡ ತಡೆಗೋಡೆ ಊರು ಮತ್ತು ನನ್ನ ಮನೆ, ಬಡತನ ನಮ್ಮ ಮನೆಯಲ್ಲಿ ಸ್ವಲ್ಪ ಶ್ರೀಮಂತವಾಗಿಯೇ ಇದೆ, ಅದು ಬಿಟ್ಟರೆ ಇನ್ನೂ ಶ್ರೀಮಂತವಾಗಿರುವುದು ಸಂಪ್ರದಾಯ, ಅಪ್ಪಿತಪ್ಪಿ ಅವಳೇನಾದರೂ ನನ್ನ ಜಾತಿಯವಳಲ್ಲದಿದ್ದರೆ ಮುಗಿದೇ ಹೋಯಿತು ನಾನು ನಮ್ಮ ಮನೆಯವರ ಪಾಲಿಗೆ ಸತ್ತಂತೆಯೇ? ನಾನಿಲ್ಲಿರುವಾಗಲೇ ನನ್ನ ತಿಥಿ ಮಾಡಿ ಮುಗಿಸುತ್ತಾರೆ ನನ್ನ ಮನೆಯಲ್ಲಿ. ಹೊಸದೊಂದು ಸಂಬಂಧಕ್ಕೆ ಹಾತೊರೆಯುತ್ತಿದ್ದ ಮನಸ್ಸು, ಹೀಗೆ ಇರುವ ಬೆಸುಗೆಯೊಂದು ಕಡಿಯುವ ಯೋಚನೆ ಬಂದಾಗ ಮನಸ್ಸು ವಿಹ್ವಲಗೊಂಡು, ಮುಖವೆಲ್ಲ ಬಿಳುಚಿಕೊಂಡಿತು. ಮೈ ಮನವೆಲ್ಲ ಕಂಪಿಸಿದಂತಾಯ್ತು ಆದರೂ ಆ ಕ್ಷಣದಲ್ಲಿ ನನ್ನ ಮನಸ್ಸಿನ ಗಟ್ಟಿ ನಿರ್ಧಾರ, ಮನೆಯವರನ್ನು ಧಿಕ್ಕರಿಸಿಯದರೂ ಅವಳನ್ನು ವರಿಸಿಕೊಳ್ಳಲೇಬೇಕು, ವಿಪರ್ಯಾಸ ನೋಡಿ ಒಂದು ಕಾಲದ ಪ್ರೇಮವಿರೋಧಿ ಇಂದು ಪ್ರೇಮರೋಗಿ.

ತಲ ತಲಾಂತರಗಳಿಂದ ಬಂದ ಭದ್ರ ಬುನಾದಿಯನ್ನೇ ಮುರಿಯಬೇಕಾದರೆ, ಪ್ರೇಮವೆಂಬ ಕಬ್ಬಿಣದ ಸೆಳೆಗಳು ಎಷ್ಟು ಗಟ್ಟಿಯಿರಬಹುದು ? ಇತಿಹಾಸವನ್ನೆ ತೆಗೆದುಕೊಂಡರೆ ಗೊತ್ತಗುವುದಿಲ್ಲವೇ ? ಕತ್ತಿ ಹಿಡಿದು ರಣಾಂಗಣದಲ್ಲಿ ಹೋರಾಡಿ ವೈರಿಗಳಿಗೆ ಸಿಂಹಸ್ವಪ್ನ ವಾಗಿದ್ದ ವೀರ ಸೇನಾನಿಯೂ ಕೂಡ ಹೆಣ್ಣೆಂಬ ಮಾಯೆಯ ಪ್ರೇಮಮಪಾಶಕ್ಕೆ ಬಿದ್ದಾಗ ಅಸಹಾಯಕನಾಗಿ ಮಂಡಿಯೂರಿ ಕೂತು ಭಿಕ್ಷುಕನಾಗಿ ಬಿಡುತ್ತಾನೆ, ಪ್ರೀತಿಯೆಂಬ ಬಲೆಗೆ ಸಿಕ್ಕಿಬಿದ್ದನೆಂದರೆ ನೀರಿನೊಳಗಿಂದ ತೆಗೆದ ಮೀನಿನಂತೆ ಚಡಪಡಿಸತೊಡಗುತ್ತಾನೆ. ಪ್ರೀತಿ ಕೈಗೆಟುಕುವ ಯೋಚನೆಯೊಂದೇ ಆ ಕ್ಷಣದ ತುರ್ತು, ಉಳಿದಿದ್ದರ ಪರಿಣಾಮ ಮಾತ್ರ ಲೆಕ್ಕಕ್ಕಿಲ್ಲ.

ಪ್ರೀತಿಯೆಂಬ ವಿಶಾಲ ಸಾಗರದ ಆಳ ನನಗೆ ಈಗಲೇ ತಿಳಿಯತೊಡಗಿದ್ದು. ಅದರ ಬಗ್ಗೆ ಯೋಚಿಸಿದಷ್ಟೂ ನನಗೆ ಅದರೆಡೆಗೆ ಸೆಳೆತ ಇಮ್ಮಡಿಯಾಗತೊಡಗಿತು. ಅದಕ್ಕೆ ಎಲ್ಲರೂ ಪ್ರೀತಿಯನ್ನು ದಶದಿಕ್ಕುಗಳಲ್ಲಿ ಪಸರಿಸಿದೆಯೆಂದೂ, ದಿಗ್-ದಿಗಂತಗಳನ್ನಾವರಿಸಿದೆಯೆಂದೂ, ಮೇರು-ಪರ್ವತದಾಚೆ ಚಾಚಿದೆಯೊಂದೂ ಹೇಳುವುದು. ಪ್ರೀತಿಸಿದವರೆಲ್ಲ ನನಗೆ ದಾರ್ಶನಿಕರಂತೆಯೂ, ಪ್ರೆಮಕವಿಗಳೆಲ್ಲ ಗುರುಗಳೆಂತೆಯೂ ಗೋಚರಿಸತೊಡಗಿದರು.. ಜಿ ಎಸ್ ಶಿವರುದ್ರಪ್ಪನವರ ಸಾಲೊಂದು ಮನದ ಮೂಲೆಯಲ್ಲಿ ಗುನುಗಹತ್ತಿತು:
ಪ್ರೀತಿಯಿಲ್ಲದ ಮೇಲೆ ಹೂವು ಅರಳಿತು ಹೇಗೆ ?
ಮೋಡ ಕರಗಿ ಮಳೆಯಾಗಿ ಭುವಿಯೆಲ್ಲ ಹಸಿರಾಯಿತು ಹೇಗೆ ?

ಅವಳ ಬಿಂಬ ದರ್ಶನವಾದ ಮರುಘಳಿಗೆಯೇ ನನ್ನ ಕಣ್ಣುಗಳಲ್ಲಿ ಸಂಚರಿಸುತ್ತಿದ್ದ ಕೋಟಿ ನಕ್ಷತ್ರಗಳಿಗೂ ಮಿಗಿಲಾದ ಹೊಳಪೇ ನನಗೇ ಉತ್ತರಿಸುತ್ತಿತ್ತು, ಸಾಗರಕ್ಕೂ ಆಳವಾಗಿರುವ ಆವಳೆಡೆಗಿನ ನನ್ನ ಬಯಕೆಯನ್ನು /ಪ್ರೀತಿಯನ್ನು. ಅವಳು ಕಾಣದಾಗ ಮನಸ್ಸು ದುಗುಡಗೊಂಡು ಮಗುವನ್ನು ಕಳಕೊಂಡ ಅಮ್ಮನಂತೆ ಚಡಪಡಿಸಿ ಬಿಡುತ್ತಿತ್ತು. ಕ್ಷಣಮಾತ್ರದಲ್ಲಿ ನೂರಾರು ಪ್ರಶ್ನೆಗಳು ಮನದೊಳಗೆ ತೂರಿಕೊಂಡು ಮನಸೆಲ್ಲ ಕೊನೆಯುಸಿರಿಗಿಳಿದು ಬಿಡುತ್ತಿತ್ತು, ನನ್ನ ನೊಟ ಅವಳಿಗೆ ಪ್ರಾಪ್ತಿಯಾದಾಗ ಮಂದಸ್ಮಿತವಾಗಿ ನಗುವ ಆ ನಗು ನನಗೆ ಅಂಬರವೆಲ್ಲ ಮಲ್ಲಿಗೆ ಎರಚಿದಂತೆ ಗೋಚರಿಸುತ್ತಿತ್ತು. ಮೈಮನವೆಲ್ಲ ತೇಜಸ್ಸು ತುಂಬಿ ಮೈ ಮರೆಯುವ ಆ ಕ್ಷಣವನ್ನು ನಾನೆಷ್ಟೇ ವರ್ಣಿಸಿದರೂ ಅದು ಬರವಣಿಗೆಗೆ ನಿಲುಕದ್ದು. ಪ್ರತಿದಿನ ಅವಳನ್ನು ಕಂಡ ಕ್ಷಣವೆಲ್ಲ ನನಗೆ ಮೈನವಿರೇಳಿಸುವ ವರ್ಣನಾತೀತ ರೋಮಾಂಚನ ಅನುಭವ.

ಅಷ್ಟಕ್ಕೂ ಪ್ರೀತಿ ಎಂದರೇನು ? ಮನಸ್ಸು ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಲು ಹಾತೊರೆಯಹತ್ತಿತು.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ, ಹದಿಹರೆಯದ ಅಪ್ರಬುದ್ಧ ಮನಸುಗಳಿಗೆ ಆಕರ್ಷಣೆಯೇ ಪ್ರೀತಿ, ಸಾವಿನ ಸಾಂಗತ್ಯದಲ್ಲಿರುವ ಮುದಿಜೀವವೊಂದಕ್ಕೆ ಜೀವನದ ಸಂಧ್ಯಾಕಾಲದಲ್ಲಾಗುವ ಆಸರೆಯೇ ಪ್ರೀತಿ, ನಾನು ಸಾವಿರ ಸಾರಿ ನನ್ನೊಳಗೇ ಇದು ಸೆಳೆತವಲ್ಲ, ಆಕರ್ಷಣೆಯಲ್ಲ, ಇದು ಜೀವನದ ಆರಂಭಕ್ಕೆ ಜೊತೆ ಹುಡುಕುವ ಕಾರ್ಯ ನೀನದನ್ನು ಹುಡುಕಿದ್ದೀಯಾ ಅಷ್ಟೇ, ನಿನ್ನ ನಿರ್ಧಾರವನ್ನು ಗೌರವಿಸು, ನಿನ್ನ ಕಣ್ಣುಗಳು ಸರಿಯಾದ್ದನ್ನೇ ನೊಡಿವೆ ಮತ್ತು ನಿನ್ನ ಮನಸ್ಸು ಸರಿಯಾದ್ದನ್ನೇ ಆಯ್ಕೆ ಮಾಡಿದೆ. ಇದೇ ಪ್ರೀತಿಯ ಪರ್ವಕಾಲಕ್ಕೆ ಸರಿಯಾದ ಸಮಯ ನಿನ್ನದು ನಿಜವಾದ ನಿಷ್ಕಲ್ಮಷವಾದ ಪ್ರೀತಿ. ಅವರವರ ಬುದ್ಧಿಮತ್ತೆಗೆ/ ವಯಸ್ಸಿಗೆ ತಕ್ಕಂತೆ ಪ್ರೀತಿಯ ಅರ್ಥ ರೂಪಾಂತರಗೊಂಡಿದೆ ಆದರೆ ಪ್ರೀತಿ ಮಾತ್ರ ಬದಲಾಗಿಲ್ಲ.

ಅವಳೊಂದಿಗೆ ಒಂದೇ ಒಂದು ಮಾತನ್ನೂ ಆಡದ, ಅವಳ ಮನಸ್ಸಿನ ಅಭಿಪ್ರಾಯವನ್ನು ತಿಳಿಯದ ನಾನು, ಅವಳನ್ನು ಕೇಳುವ ಮೊದಲೇ ನನ್ನವಳನ್ನಾಗಿ ಮಾಡಿಕೊಂಡಿದ್ದೆ. ಅವಳ ಮುದ್ದಾದ ಮುಖವನ್ನು ಎರಡು ಕ್ಷಣ ದಿಟ್ಟಿಸಿ ನೋಡಲು ಅಂಜುತ್ತಿದ್ದ ನಾನು, ಅದ್ಯಾವ ಮಾಯೆಯಲ್ಲಿ ನನ್ನಂತರಂಗದ ಅಭಿಲಾಷೆಯನ್ನು ಅವಳಿಗೆ ತಿಳಿಸಬೇಕು.? ಎದುರಿಗೆ ನಿಂತು "ನನ್ನನ್ನು ನಿನ್ನ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತೀಯಾ" ಎಂದು ಕೇಳೋಣವೆಂದುಕೊಂಡೆ ಅಕಸ್ಮಾತ್ ಅವಳು "ಇಲ್ಲ" ಎಂದು ತಿರಸ್ಕರಿಸಿಬಿಟ್ಟರೆ ?. ಕಣ್ಣು ಕತ್ತಲುಗುಡಿಸಿದಂತಾಯ್ತು, ಇಲ್ಲ ಯಾವ ಘಳಿಗೆಯಲ್ಲಿ ನಾನು ಇವಳನ್ನು ನೋಡಿದ್ದೇನೆಯೋ ನನಗದು ತಿಳಿಯದು ನಾನು ಸಂಗಾತಿ ಎಂದು ವರಿಸುವುದಾದರೆ ಇವಳನ್ನೇ.. ಅವಳು "ಇಲ್ಲ"ವೆಂದಾಗ ನನಗಾಗುವ ಮಾನಸಿಕ ಆಘಾತದ ಬಗ್ಗೆ ಯೋಚಿಸಲೂ ಮನಸ್ಸು ಬಯಸಿರಲಿಲ್ಲ, ಕೇಳುವುದಾದರೆ ಎದುರಿಗೆ ನಿಂತು "ದಯವಿಟ್ಟು ನನ್ನನ್ನು ನಿನ್ನ ಬಾಳ ಸಂಗಾತಿಯಾಗಿ ಸ್ವೀಕರಿಸು" ಎಂದು ಕಾಲಿಗೆ ಬಿದ್ದಾದರೂ ಕೇಳೋಣ ಎಂದು ನಿಶ್ಚಯಿಸಿಕೊಂಡೆ.ಆದರೆ ನನ್ನನ್ನು ನೋಡಿದಾಗಲೆಲ್ಲ ಅವಳ ಮನಸ್ಸು ಉಲ್ಲಸಿತವಾಗುವುದನ್ನು ನೆನೆದು "ಮುಖ ಮನಸ್ಸಿನ ಕನ್ನಡಿಯಿದ್ದಂತೆ, ನನ್ನ ನೋಡಿದ ತಕ್ಷಣವೇ ಅವಳ ಬದಲಾಗುವ ಮುಖಚರ್ಚೆಯೇ ಹೇಳುತ್ತದೆ ನನ್ನ ಮೇಲಿನ ಅವಳ ಪ್ರೀತಿಯನ್ನು" ಎಂದುಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿದ್ದೆ.

ಅವಳೇನಾದರೂ ನನ್ನು ಎಷ್ಟು ಪ್ರೀತಿಸುತ್ತೀಯಾ? ಎಂದು ಕೇಳಿದರೇ ಏನು ಹೇಳುವುದು ?

ಕಾವ್ಯಶೈಲಿಯಲ್ಲಾಗಲೀ, ಕಲ್ಪನಾಶೈಲಿಯಲ್ಲಾಗಲೀ, ಅವಳಿಗೆ ಯಾವುದೇ ಉತ್ತರ ಕೊಡುವುದು ಬೇಡವೇ ಬೇಡ, ವಾಸ್ತವದಲ್ಲೇ ನನ್ನ ಪ್ರೀತಿಯನ್ನು ಅವಳಿಗೆ ಅನಾವರಣ ಗೊಳಿಸಬೇಕು. ಮತ್ತು ಮಾತಿನಲ್ಲಾಗಲೀ, ಹೇಳುವ ಶೈಲಿಯಲ್ಲಾಗಲೀ ಯಾವುದೇ ಆಡಂಬರ ತೋರದೇ ಹೃದಯದ ಪಿಸುಮಾತನ್ನು ಅವಳಿಗೆ ಕೇಳಿಸುವಂತೆ ಗಟ್ಟಿಯಾಗಿ ಉಸುರಬೇಕೆಂದು ದೃಢ ನಿಶ್ಚಯ ಮಾಡಿಕೊಂಡೆ.

ನೋಡು "ನಾನು ನಿನ್ನನ್ನು ಬಡತನದ ನೆರಳೂ ಸುಳಿಯದಂತೆ ಸಾಕುತ್ತೇನೆ ಎನ್ನಲ್ಲಾರೆ, ಆದರೆ ನೀನು ಸುಖವಾಗಿರಲು ಏನು ಬೇಕೋ ಅದನ್ನು ಮಾಡಲು ಮಾತ್ರ ಹಿಂಜರಿಯಲಾರೆ
ನಿನಗೆ ಕಷ್ಟಗಳೇ ಬರದಂತೆ ನೊಡಿಕೊಳ್ಳುತ್ತೇನೆ ಎನ್ನಲಾರೆ, ಆದರೆ ಕಷ್ಟಕಾಲದಲ್ಲಿ ನಿನ್ನ ಕಮಲದಂತ ಕಣ್ಣುಗಳಲ್ಲಿ ಒಂದು ಹನಿ ಕಂಬನಿಯೂ ಹೊರಬರುವುದನ್ನು ನಾನು ಸಹಿಸಲಾರೆ
ನನ್ನ ಜೀವಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಸುತ್ತೇನೆ ಎನ್ನಲಾರೆ, ಆದರೆ ಜೀವನದಲ್ಲಿ ಒಂದು ಘಳಿಗೆಯೂ ನಿನ್ನ ಜೀವವನ್ನು ನಾನು ಹಿಂಡಲಾರೆ"
ಇಷ್ಟು ಹೇಳಿ, ಸಾಧ್ಯವಾದರೆ ಅವಳಿಗಾಗಿ ಕೆಳಗಿನ ಕವನದ ಸಾಲುಗಳನ್ನು ಒಂದು ಕಾಗದದಲ್ಲಿ ಬರೆದು ಅವಳ ಕೈಗಿಟ್ಟು ಬರಬೇಕೆಂದು ನಿಶ್ಚಯಿಸಿಕೊಂಡೆ. ನನ್ನ ಕವನದ ದೆಸೆಯಿಂದಾದರೂ ಪ್ರೇಮಪರ್ವದ ಯುಗ ಆರಂಭವಾದೀತೆಂಬ ದೂರಾಲೋಚನೆಯಿಂದ.

ಕೇಳು ಹವಳದ ಮೊಗದ ಸುಂದರಿಯೇ....
ನಿನ್ನ ಬಾಳ ಕತ್ತಲೆಗೆ ನಾನು ಕಣ್ಣಾಗುವೆ
ನಿನ್ನ ಮೂಕ ರಾಗಕೆ ಧ್ವನಿಯಾಗುವೆ
ನಿನ್ನ ಆಡದ ಮಾತಿಗೆ ಕಿವಿಯಾಗುವೆ

ಜೀವಕೂ-ಜೀವನಕೂ ಜೊತೆಯಾಗುವೆ
ನೊವಿಗೂ ನಲಿವಿಗೂ ಹೆಗಲಾಗುವೆ
ಕೋಪಕೂ.. ತಾಪಕೂ..ತಂಪೆರೆಯುವೆ
ಸೋಲಲ್ಲೂ ಜಯದಲ್ಲೂ ಜೊತೆನಿಲ್ಲುವೆ

ಉಳಿದ ಬದುಕಿನ ಯುಗಳ ಗೀತೆಯನ್ನು ಹಾಡಲು ನಿಮ್ಮ ಆಸರೆಯನ್ನು ಬಯಸಿ ಬಂದಿರುವ ಈ ಜೀವದ ಆತ್ಮವಾಣಿಯನ್ನು ತುಂಬು ಮನಸ್ಸಿನಿಂದ ಸ್ವೀಕರುಸುತ್ತೀರೆಂಬ ನಿರೀಕ್ಷೆಯಲ್ಲಿದ್ದೇನೆ ..
ನಿಮ್ಮವನಾಗಬೇಕೆಂದು ಬಯಸುವ -ಚಂದ್ರು

ನಾನೇನು ಕಟ್ಟಾ ನಾಸ್ತಿಕನಲ್ಲದಿದ್ದರೂ ಅರ್ಥವಿಲ್ಲದ ಆಚರಣೆಗಳನ್ನು, ಪೌರೋಹಿತಶಾಹಿಯನ್ನು, ಆಡಂಬರದ ಪೂಜೆಗಳನ್ನು, ಡಂಭಾಚಾರದ ಭಕ್ತಿಯನ್ನು, ಅವೈಜ್ನಾನಿಕವಾಗಿರುವ ಯಾವುದೇ ತಲೆ ಬುಡಗಳಿಲ್ಲದೇ ಜನರನ್ನು ಹಾದಿತಪ್ಪಿಸುವ ಮಾಟ ಮಂತ್ರ ಗಳನ್ನು ನಾನು ಬಹುವಾಗಿ ವಿರೋಧಿಸುತ್ತೇನೆ, ದೇವರ ವಿಷಯ ಬಂದಾಗ ನನಗೆ ಜಿ ಎಸ್ ಎಸ್ ರವರ

"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣು ಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ"

ಸಾಲು ನೆನಪಾಗುತ್ತದೆ, ಇಂತಹ ವೈಚಾರಿಕ ಹಿನ್ನೇಲೆಯುಳ್ಳ ನಾನು ಪ್ರೀತಿಯ ವಿಷಯದಲ್ಲಿ ನನಗೆ ಜಯವಾಗಲಿ ಎಂದು ಇಲ್ಲೇ ಹತ್ತಿರದ ದೇವರಿಗೆ "ವಿಶೇಷ" ಪೂಜೆಯನ್ನೂ ಮಾಡಿಸಿದೆ. ಬರುಬರುತ್ತ ನಾನು ಆ ದೇವಿಯ ದಾಸನಾಗಿರುವಂತೆಯೂ, ಹಗಲೂ ರಾತ್ರಿ ಆ ದೇವಿಯ ಉಪಾಸನೆಗೈವ ಭಕ್ತನಂತೆಯೂ ಗೋಚರಿಸಹತ್ತಿತು, ಮನಸ್ಸು ತನ್ನ ಸ್ಥಿಮಿತ ಕಳೆದುಕೊಂಡಿತು, ನನ್ನ ದೇಹದ ನಿರ್ವಹಣಾಶಕ್ತಿಯೇ ಕಳೆಗುಂದಿದ ಅನುಭವವಾಗತೊಡಗಿತು. ಎನೀ.. ವೇದನೆ ....ಅನುಭವಿಸುವ ಹಾಗೂ ಇಲ್ಲ ಬಿಡುವ ಹಾಗೂ ಇಲ್ಲ. "ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು" ಎಂಬ ಸಾಲನ್ನು ಬಿಟ್ಟರೆ ನನ್ನ ಯಾವ ಆಸೆ, ಆಕಾಂಕ್ಷೆ, ಅಭಿರುಚಿ, ಆಸಕ್ತಿಯಲ್ಲೂ ನಾನು ಪ್ರೀತಿಯ ಬಗ್ಗೆ ಯೋಚಿಸಿದವನಲ್ಲ, ನನ್ನ ಎಡಗಾಲಿನ ಕೊನೆಯ ಧೂಳಿನ ಕಣದಷ್ಟಿದ್ದ ಪ್ರೀತಿಯೊಂದು ಹೆಮ್ಮರವಾಗಿ ಅಣು ಅಣುವು ಬಿಡದೇ ಆವರಿಸಿ ಹೋಗಿತ್ತು. ಅದಾವ ಮಾಯಾಜಿಂಕೆಯ ವೇಷದಲ್ಲಿ ಬಂದು ಅವಳು ಅದೇನು ಮೋಡಿ ಮಾಡಿದಳೋ ತಿಳಿಯದಾಗಿತ್ತು. ಪಾದರಸದಷ್ಟು ಚಲನಶೀಲನಾಗಿದ್ದ ನಾನು ನನ್ನ ಮನದನ್ನೆಯ ಪ್ರೇಮ ಸೆಲೆಗೆ ಸಿಲುಕಿ ಜರ್ಜರಿತವಾಗಿ ನಿರ್ಜೀವ ವಸ್ತುವಿಗೆ ಪ್ರಾಣ ತುಂಬಿದಂತಾಗಿದ್ದೆ.

ಅಷ್ಟರೊಳಗೆ ಆಕಸ್ಮಿಕವಾಗಿ ಅನಿರೀಕ್ಷಿತ ಘಟನೆಯೊಂದು ನಡೆದು ಹೋಯಿತು, ನನ್ನ ಬಾಲ್ಯದ ಗೆಳೆಯನೊಬ್ಬನನ್ನು ಭೇಟಿಯಾಗಲು ಸಮಯ ನಿಗದಿ ಮಾಡಿಕೊಂಡು ಹೋಗಿದ್ದೆ ಅಲ್ಲಿ ಅವನು ಪಕ್ಕದಲ್ಲಿರುವವನನ್ನು ಕುರಿತು ಇವರು ನನ್ನ ಗೆಳೆಯನೆಂದೂ ... "ಪೂರ್ಣಸೇವಾ ಐ ಟಿ ಸೊಲೂಷನ್ಸ್" ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದೂ ಹೇಳಿದ... ಅಷ್ಟೇ ಕಿವಿಗಳಲ್ಲಿ ಸಣ್ಣದಾದ ಕಂಪನ ಉಂಟಾಯಿತು.. ಇನ್ನೊಮ್ಮೆ ಯಾವ ಕಂಪನಿಯೆಂದು ಕೇಳಿದೆ, ಅವನು ಮುಖದಲಿ ಯಾವುದೇ ಸ್ಪಷ್ಟ ಭಾವನೆಗಳನ್ನು ಹೊರಹಾಕದೇ ಏಕ ಮನಸ್ಕನಾಗಿ ನನ್ನನ್ನೇ ದಿಟ್ಟಿಸಿನೋಡುತ್ತ "ಪೂರ್ಣಸೇವಾ ಐ ಟಿ ಸೊಲೂಷನ್ಸ್" ಕಂಪನಿ ಎಂದ ..

ಹೌದು ನಿಮ್ಮ ಊಹೆ ನಿಜ.. ಅದೇ ಮಾಯಾಂಗನೆಯ ಕಂಪನಿಯದೇ ಹೆಸರದು, ಕೂಳು ನೀರಿನ ಪರಿವೆಯಿರದೇ ಆಗುಂತಕನೊಬ್ಬ "ನಿಧಿ"ಯ ಜಾಡನ್ನು ಹಿಡಿದು ಅಲೆಮಾರಿ ಕಾಡಿನಲ್ಲಿ ಅಲೆದು ಅಲೆದು ಸಾಕಾಗಿ ನಿಷಣ್ಣನಾಗಿದ್ದವನಿಗೆ ಒಮ್ಮೆಲೇ "ನಿಧಿ"ಕಂಡ ತಕ್ಷಣ ಪುಳಕಗೊಂಡಂತಾಗಿತ್ತು ನನ್ನ ಪರೀಸ್ಥಿತಿ. ಮುಖವೆಲ್ಲ ಬಾನಗಲ ಅರಳಿ, ಮೈ ಮೇಲೆ ಉತ್ಸಾಹದ ಚಿಲುಮೆ ಉಕ್ಕಿ ಬಂದು, ಜಡವಾಗಿದ್ದ ಧಮನಿಗಳಿಗೆಲ್ಲ ಹೊಸ ರಕ್ತ ಹರಿದು ಬಂದು, ನರ ನಾಡಿಗಳಿಗೆಲ್ಲ ಚೈತನ್ಯ ಶಕ್ತಿ ಬಂದಂತಾಗಿ ಎದುರಿಗಿರುವವನು ನನಗೆ ದೇವಧೂತನಂತೆಯೂ ದೇವರು ನನ್ನ ಕಾರ್ಯಸಿದ್ಧಿಗಾಗಿ ಅವನನ್ನು ದೇವಲೋಕದಿಂದ ಕಳಿಸಿದಂತೆಯೂ ಅನ್ನಿಸತೊಡಗಿತು. ಕೂಡಲೇ ಅವನ ಪೂರ್ವಾಪರಗಳನ್ನೂ ಯೋಚಿಸದೇ ನನ್ನ ವೃತ್ತಾಂತವನ್ನೆಲ್ಲ ಅವನಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಹಸಿವಿನ ತೀವ್ರತೆಯಲ್ಲಿರುವ ಭಿಕ್ಷುಕನೊಬ್ಬ ಊಟಕ್ಕೆ ಬೇಗ ತರುವಂತೆ ಮನೆಯ ಮುಂದೆ ಗೀಳಿಡುವ ಹಾಗೆ ಅವನೆದುರು ಗೋಗರೆದು ಕೊಳ್ಳಲಾರಂಭಿಸಿದೆ

ಅವನು ನನಗೆ ರಚ್ಚೆ ಹಿಡಿದ ಮಗುವಿಗೆ ಸಾಂತ್ವನ ಹೇಳುವಂತೆ ನನ್ನನ್ನು ಸಮಾಧಾನಪಡಿಸಿ, ಅವರ ಕಂಪನಿಯಲ್ಲಿ ಕೇವಲ ೧೦೦ ಜನ ಮಾತ್ರ ಇರುವುದಾಗಿಯೂ, ಕಂಡುಹಿಡಿಯುವುದು ಬಹಳ ಸುಲಭವೆಂದೂ, "ಚಂದ್ರಾ ಲೇ ಔಟ್" ಕ್ಯಾಬ್ ಲಿಸ್ಟ್ ತೆಗೆದರೆ ಎಲ್ಲಾ ಗೊತಾಗುತ್ತದೆಯೆಂದೂ, ಏನೂ ಯೋಚಿಸದಿರುವಂತೆಯೂ ಹೇಳಿದ. ನಾಳೆ ಅವಳ ಬಗ್ಗೆ ಪೂರ್ತಿ ತಿಳಿದುಕೊಂಡ ಮೇಲೆ ನನಗೆ ತಿಳಿಸುವುದಾಗಿ ಹೇಳಿ ನನ್ನ ಫೊನ್ ನಂಬರ್ ತೆಗೆದುಕೊಂಡು ಹೋದ.

ನಾಳೆಗಾಗಿ ಕಾತುರತೆಯ ಜಾತಕ ಪಕ್ಷಿ ಕಾಯತೊಡಗಿತು ಪ್ರತಿ ಕ್ಷಣವನ್ನು .. ಪ್ರತಿ ಕ್ಷಣವೂ ಯುಗವಾಗಿ ಗೋಚರಿಸಹತ್ತಿತು. ಆಕಸ್ಮಿಕವಾಗಿ ಸಂಧಿಸಿದ ಆ ಗೆಳೆಯನ ದೆಸೆಯಿಂದಾದರೂ ನನ್ನ ರೋದನೆಗೆ ಕೊನೆ ಹಾಡಬೇಕು, ನನ್ನ ಮನಸ್ಸಿನ ನಿವೇದನೆಗೆ ಇವನನ್ನೇ ಸೇತುವೆಯನ್ನಾಗಿ ಬಳಸಿಕೊಳ್ಳಬೇಕು ಇತ್ಯಾದಿ..ಇತ್ಯಾದಿ.. ಮನಸ್ಸು ಗರಿಬಿಚ್ಚಿ ಬಾನಗಲ ಹಾರಾಡತೊಡಗಿತ್ತು, ಅಂದು ನನ್ನ ಮನಸ್ಸಿನ ಹಕ್ಕಿಗೆ ಬಾನು ಕೂಡ ಚಿಕ್ಕದಾಗಿ ಗೋಚರಿಸತೊಡಗಿತು.

ಕೊನೆಗೂ ನನ್ನ ಜೀವನದಲ್ಲಿ ತುಂಬ ನಿರೀಕ್ಷೆ ಇಟ್ಟುಕೊಂಡ ದಿನ ಬಂದೇ ಬಿಟ್ಟಿತು, ಬೆಳಗ್ಗೆಯೆ ಅವನಿಗೆ ಫೋನ್ ಮಾಡಿ "ನಿನ್ನ ನಿತ್ಯದ ಕೆಲಸಕ್ಕಿಂತ ಇದು ತುಂಬಾ ಮಹತ್ವವಾದುದು" ಎಂದು ನೆನಪು ಮಾಡಿಕೊಟ್ಟೆ, ದಿನಪೂರ್ತಿ ಹೇಗೋ ನಿಭಾಯಿಸಿಕೊಂಡು ಸಾಯಂಕಾಲ ಮನೆಯ ಎದುರು ನಿಂತು ಅವನ ಕಾಲ್ ಗಾಗಿ ಕಾಯುತ್ತಿದ್ದೆ, ಅಷ್ಟರಲ್ಲೇ ಫೋನ್ ರಿಂಗಿಣಿಸಿದ ಶಬ್ದವಾಯಿತು, ಒಳ ಒಳಗೇ ಪುಳಕಗೊಂಡು ಕುತೂಹಲ ಮತ್ತು ಗಾಬರಿ ಮಿಶ್ರಿತ ಮನಸ್ಸಿನಿಂದ ಫೋನ್ ಎತ್ತಿಕೊಂಡೆ

"ಮಗಾ ದಯವಿಟ್ಟು ಅವಳನ್ನು ಮರೆತುಬಿಡು, ನಿನ್ನ ನಿಷ್ಕಲ್ಮಷ ಪ್ರೀತಿ ಪಡೆಯುವ ಭಾಗ್ಯ ಅವಳಿಗಿಲ್ಲ ಅವಳೀಗ ಪರರ ಸ್ವತ್ತು ಇದೇ ತಿಂಗಳು ೧೩ ರಂದು ಅವಳ ಮದುವೆ "

ಒಂದೇ ಕ್ಷಣ, ಅದೊಂದೇ ಮಾತು ನನ್ನ ಕಿವಿಗೆ ಬರಸಿಡಿಲಿನಂತೆ ಬಂದೆರಗಿತ್ತು, ಮುಳ್ಳಿನ ಕಂತೆಯೊಂದನ್ನು ಹಿಡಿದು ಮೊಬೈಲ್ ನಿಂದ ಕಿವಿಗೆ ಚುಚ್ಚಿದಂತಾಗಿತ್ತು, ಮನೆಯಂಗಳದಿಂದ ಒಳಗೆ ಹೋಗಲು ಕೂಡ ಆಗದೇ ಕಣ್ಣುಗಳು ಮಂಜು ಮುಸುಕಿದಂತೆ ಗೋಚರಿಸತೊಡವು, ಅದೇ ಮಂಜು ಮುಸಿಕಿದ ದಾರಿಯಲ್ಲಿ ಒಳ ಬಂದು ಗೋಡೆಯೊಂದಕ್ಕೆ ಆತುಕೊಂಡು ಹಾಗೆ ಶೂನ್ಯಮನಸ್ಕನಾಗಿ ಕೂತು ಬಿಟ್ಟೆ. ಎಷ್ಟೋ ಹೊತ್ತಿನ ನಂತರ ಮೈಮೇಲೆ ಎಚ್ಚರವಾದಂತೆನಿಸಿ ಸುತ್ತಲೂ ನೋಡಿದೆ, ನಾಲ್ಕೂ ಗೋಡೆಗಳು ನನ್ನನ್ನು ನೋಡಿ ಗಹ ಗಹಿಸಿ ನಗುತ್ತಿರುವಂತೆ ಭಾಸವಾಗತೊಡಗಿತು. ಕೂಡಲೇ ಮನೆಯಿಂದ ಎದ್ದು ಹೊರಟೆ, ಯಾವುದೇ ಶಬ್ಧಗಳಿಗೆ ಅವಕಾಶವಿರದ, ನಿರುಮ್ಮಳವಾಗಿರುವ, ನಮ್ಮಿಬ್ಬರ ಅನಾಮಿಕ ಮಿಲನಕ್ಕೆ ವೇದಿಕೆ ಹಾಕಿದ್ದ ಅದೇ ಹಸಿರು ಉದ್ಯಾನವನಕ್ಕೆ ಹೋಗಿ ಕೂತೆ. "ಹಸಿರು.." ಮನಸ್ಸೆಂಬ ಮನಸ್ಸೇ ಪ್ರೀತಿಯೆಂಬ ಕಾಡ್ಗಿಚ್ಚಿನ ಪ್ರಕೋಪಕ್ಕೆ ಸಿಲುಕಿ ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗುತ್ತಿರುವಾಗ ಈ ಉದ್ಯಾನವನದ ಹಸಿರೆಲ್ಲ ನನ್ನನ್ನು ನೋಡಿ ಗೇಲಿ ಮಾಡಿದಂತೆನಿಸ ತೊಡಗಿತು, ಅವಮಾನವಾದಂತೆನಿಸಿ ಹಾಗೆಯೇ ಕಣ್ಮುಚ್ಚಿಕೊಂಡು ಕುಳಿತುಬಿಟ್ಟೆ ಸುಮಾರು ಹೊತ್ತಿನ ನಂತರ ಕಣ್ತೆರೆದಾಗ ನಿಧಾನವಾಗಿ ಕತ್ತಲು ಆವರಿಸತೊಡಗಿತು. "ಕತ್ತಲು" ಎಷ್ಟೊಂದು ಹಿತವಾಗಿದೆ, ಹೀಗೇ ಇರಬಾರದಿತ್ತೆ ಅಂದು ಆ ಮಾಯಾಜಿಂಕೆಯ ಮುಖವನ್ನು ನಾನು ನೋಡಿದಾಗ ? ಯಾವ ಮಾಯಾಜಾಲಕ್ಕೆ ಬಿದ್ದು ನಾನು ನನ್ನ ಮನಸ್ಸನ್ನು ವಿಷಣ್ಣಗೊಳಿಸಿದೆ ? ನನ್ನದೇ ಜಗತ್ತಿನಲ್ಲಿ ನಾನು ಮತ್ತು ನನ್ನ ಮನಸ್ಸು ರಾಜನಂತೆ ಬದುಕುತ್ತಿದ್ದೆವು. ಒಂದೇ ನೋಟ, ಅಪರೂಪಕ್ಕೆ ಬರುವ ಅತಿಥಿಯಂತೆ ಬಂದ ಒಂದೇ ಭಾವನೆ, ನನ್ನ ಮನಸ್ಸನ್ನೆಲ್ಲ ಎಂದೂ ಸರಿದೂಗಿಸಲಾಗದ ವಿಕಲಾಂಗಚೇತನಕ್ಕೊಳಪಡಿಸಿಬಿಟ್ಟಿತ್ತು. ಈ ಪ್ರೀತಿಯೆಂಬ ಚಕ್ರವ್ಯೂಹಕ್ಕೆ ಸಿಲುಕಿ ಜೀವನ, ಜಗತ್ತು ಎಲ್ಲವೂ ಅಸಹ್ಯವೆನಿಸತೊಡಗಿತು

ಅವಳ ಪಾತ್ರವೇನು ?
ಏನೂ ಇಲ್ಲ .. ಎಲ್ಲವೂ ನನ್ನದೇ ಕಲ್ಪನೆ, ನನ್ನದೇ ಮಾತುಗಳು, ನನ್ನದೇ ಭಾವನೆಗಳು, ಮನಸ್ಸಿನ ಭಾವನೆಗಳಿಗೆ ಗರಿಬಿಚ್ಚುತ್ತಾ ಹೋದಂತೆ ಭ್ರಮಾಲೋಕದಲ್ಲಿ ಎತ್ತರದ ಪರಿವೆಯೇ ಇಲ್ಲದೇ ಹಾರಡುತ್ತಿದ್ದೆ, ಈಗ ರೆಕ್ಕೆಗಳೆಲ್ಲ ಉದುರಿಬಿದ್ದಿವೆ, ಮನಸ್ಸು ಘಾಸಿಗೊಳಗಾಗಿದೆ. ನೆಮ್ಮದಿಯ ವಿಷಯವೇಂದರೆ ಅದು ತೀರ ವಾಸಿಯಾಗದಷ್ಟು ಘಾಸಿಯಾಗಿಲ್ಲ.

ಮುಂದೆ ?
"ಈಸಬೇಕು ಇದ್ದು ಜೈಸಬೇಕು", ಬಹುಷಃ ನನ್ನ ಗೆಳೆಯರು ಇನ್ಮುಂದೆ "ಪ್ರೀತಿಸುವ ಹೃದಯಗಳ ಭಾವನೆಗಳು ನಿನಗೆ ಅರ್ಥವಾಗುವುದಿಲ್ಲ" ಎನ್ನುವ ವಾಕ್ಯದಿಂದ ಮುಕ್ತನಾಗುತ್ತೇನೆ. ಏಕೆಂದರೆ ನನಗೀಗ ಪ್ರೀತಿಯ ವ್ಯಾಕ್ಯರಣವೂ ಗೊತ್ತು, ವ್ಯಾಕುಲತೆಯೂ ಗೊತ್ತು.

ಸಂಗಾತಿಯ ಆಯ್ಕೆಯಾಗುವುದಾದರೆ ಪ್ರೀತಿಯಿಂದಲೇ ಎನ್ನುವಷ್ಟು ಅತಿರೇಕದ ಪರಮಾವಧಿಗೆ ನಾನಿನ್ನು ಹೋಗಿಲ್ಲ, ಮನಸ್ಸು ಸಂಪೂರ್ಣವಾಗಿ ನನ್ನ ಸ್ಥಿಮಿತಕ್ಕೇ ಬಂದಿದೆ, ವಯಸ್ಸಿನ ಅನುಪಾತಕ್ಕನುಗುಣವಾಗಿ ಬಂಧುಗಳು, ಹಿತೈಷಿಗಳು ನನ್ನ ಬಗ್ಗೆ ಓಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತ ಬಂದಿದ್ದಾರೆ, ಸೋ.. ಮದುವೆಯ ನಿರ್ಧಾರ ಕೂಡ ಓವರ್ ಟು ದೆಮ್ಮ್
ದೇಹದಂಡನೆಯಾಗಿದ್ದರೆ ಬೇಗ ವಾಸಿಯಾಗುತ್ತಿತೇನೋ ಆದರೆ ಮನಸ್ಸಿಗೆ ಘಾಸಿಯಾಗಿದೆ ಗಾಯ ವಾಸಿಯಾಗಲು ಸ್ವಲ್ಪ ಸಮಯಬೇಕು.

ಮಾನಸವಾಣಿಯಿಂದ,
-ಚಂದ್ರು

sooryasta

sooryasta

Followers