Tuesday, June 30, 2009

--:ಆಗುಂತಕನ ಆಡದ ಮಾತುಗಳು:--

ಮುನ್ನುಡಿ
ದೇಶ ಎಷ್ಟೇ ವೇಗವಾಗಿ ಬೆಳೆಯಲಿ, ಆಧುನಿಕತೆಯ ಆಕರ್ಷಣೆ ನಮ್ಮ ಮೆಲೆ ಎಷ್ಟೇ ಪ್ರಭಾವ ಬೀರಲಿ, ನಮ್ಮೆಲ್ಲರ ಆತ್ಮ/ಬೇರು ಇರುವುದು ಹಳ್ಳಿಗಳಲ್ಲಿ.ಅಲ್ಲಿ ಆಳವಾಗಿ ಬೇರೊರಿರುವ ಆಚರಣೆ, ನಂಬಿಕೆ, ಉತ್ಸವ, ಜಾತ್ರೆ, ಸುಗ್ಗಿ, ಹಬ್ಬಗಳಲ್ಲಿ. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಇವುಗಳ ಆಚರಣೆ ಕೇವಲ ಯಾಂತ್ರಿಕವಾಗಿದೆ.ನಿಜಕ್ಕೂ ಇದು ಆತಂಕಕಾರಿ ಹಾಗೂ ಅಷ್ಟೇ ಆಘಾತಕಾರಿ, ಜೊತೆಗೆ ಅನಿವಾರ್ಯ ಕೂಡ. ನಗರೀಕರಣದ ಪ್ರಭಾವದಿಂದ ಜೀವನದ ಸಂಧ್ಯಾಕಾಲದಲ್ಲಿ ಹಿರಿಯರ ಜೊತೆ ಇದ್ದು ಅವರ ಸೇವೆ ಭಾಗ್ಯವಿರದಂತಾಗಿದೆ, ಜೀವನಪೂರ್ತಿ ಗಾಣದ ಎತ್ತಿನಂತೆ ದುಡಿದು ಹೈರಾಣಾಗಿರುವ ಅವರಿಗೆ ಈಗ ಬೇಕಾಗಿರುವುದು ನಮ್ಮ ಪ್ರೀತಿಯ ಆಸರೆ. ಇದನ್ನು ನಾನು ಹಿಂದೆ ಬ್ರಿಟೀಷರ ಒಡೆದು ಆಳುವ ನೀತಿಗೆ ಹೊಲಿಸುತ್ತೇನೆ, ನಮ್ಮ ಬೇರುಗಳನ್ನು ಕಿತ್ತೊಗೆಯಲು ಈ ಅಗಲಿಕೆಯೂ ಒಂದು ಸಂಚೇ ??? ಹಳ್ಳಿಯ ಪ್ರತಿಯೊಂದು ಮನೆಗಳ ಬೆಳವಣಿಗೆಗೂ/ ಆತಂಕಕ್ಕೂ ದೊಡ್ಡಣ್ಣ ಅಮೇರಿಕ, ಪ್ರತ್ಯಕ್ಷ್ಯ/ ಪರೋಕ್ಷವಾಗಿ ಸಾಕಷ್ಟು ಪ್ರಭಾವ ಬೀರಿದೆ.

ಒಬ್ಬ ಡಾಕ್ಟರ್ ರೊಗಿಗಳನ್ನು ಗುಣಪಡಿಸುತ್ತಾನೆ, ಒಬ್ಬ ಶಿಕ್ಷಕ ಜಗತ್ತಿಗೆ ವಿದ್ಯದಾನ ಮಾಡುತಾನೆ, ಹಾಗಾದರೆ ಸಮಾಜದಲ್ಲಿ ನನ್ನ ಕಾರ್ಯಕ್ಷೆತ್ರವೇನು ? ಬೇರೆ ಕೆಲಸಗಳಿಗೆ ಇರುವ ಒಂದು ನಿರ್ದಿಷ್ಟ ವ್ಯಾಸ, ಪರೀಧಿ ನನಗೆಕೆ ಇಲ್ಲಾ ? ಪ್ರತಿಯೊಂದು ಕ್ಷೇತ್ರದ ಹುಟ್ಟಿಗೂ ಕಾರಣವಿರುವಾಗ, ನಾನೇನು ದಿಢೀರನೆ ಹುಟ್ಟಿ ಬಂದ ಉದ್ಭವ ಮೂರ್ತಿಯೆ ? ಈ ದೇಶದಲ್ಲಿ ನನ್ನ ಆಯುಷ್ಯ ಎಷ್ಟು ದಿನ ? ಬೆಲೆ ಇರುವ ವರೆಗೂ ಅಷ್ಟೇ ಈ ಕೆಲಸ ಎನ್ನುತ್ತಾರೆ, ಹಾಗಾದರೆ ನನ್ನದೇನು ವ್ಯಭಿಚಾರವೇ ?

ಎಂದು ತನ್ನ ಹುಟ್ಟನ್ನು ಮತ್ತು ಜನನದ ಮೂಲ ಉದ್ದೆಶವನ್ನು ತಿಳಿಯುವ ಒಂದು ನಿರ್ಜೀವ ಪಾತ್ರದ ತೊಳಲಾಟವನ್ನು ಈ ಕೆಳಗಿನಂತೆ ವಿವರಿಸಿದ್ದೇನೆ.


--:ಆಗುಂತಕನ ಆಡದ ಮಾತುಗಳು:--
ನಾನ್ಯಾರು ???? ನಾನೇಕೆ ಇಲ್ಲಿಗೆ ಬಂದೆ ?????
ತುಂಬಾ ದಿನಗಳಿಂದ ಇಂತಹದ್ದೊಂದು ಪ್ರಶ್ನೆ ಮನದಲ್ಲಿ ಮಿಡಿಯುತ್ತಿತ್ತು, ಕೆಲವೊಂದು ಪ್ರಶ್ನೆಗಳೇ ಹಾಗೆ ಬಿಟ್ಟೇನೆಂದರೂ ಬಿಡದೇ ಕಾಡುತ್ತವೆ, ಬೇಡವೆಂದರೂ ನಾಲಿಗೆ ಮತ್ತೆ ಮತ್ತೆ ನೋಯುವ ಹಲ್ಲಿಗೇ ಮುತ್ತಿಕುತ್ತದಲ್ಲಾ ಹಾಗೆ. ಈ ನನ್ನ ಆಂತರ್ಯದ ಮಾರ್ದನಿ ಕೆಳಿಸಿಕೊಳ್ಳುವ ಕಿವಿಗಳಾಗಲೀ, ಅಥವಾ ವ್ಯವಧಾನವಾಗಲೀ ಯಾರಿಗೂ ಇರಲಿಲ್ಲವೆನಿಸುತ್ತದೆ.ಅಂದು ನಾನು ಏನೊ ಕೇಳಲು ಹೊರಟ ನನ್ನ ಪಾಡು ಅಕ್ಷರಶಃ ಮೂಕ ಪ್ರೇಕ್ಷಕನಾಗಿತ್ತು, ಬಲೆಗೆ ಸಿಕ್ಕಿ ಹೊರಬರಲು ನರಳಾಡುವ ಅಸಹಾಯಕ ಇಲಿಯಂತಾಗಿತ್ತು. ನನ್ನ ಒಂದೇ ಪ್ರಶ್ನೆ ಅಂದು ಎಲ್ಲರಿಗೂ ಅಪಥ್ಯವಾಗಿತ್ತು, ನನ್ನ ಸರಿಯಾದ ಚಿತ್ರಣವನ್ನು ನಾನು ತೆಗೆದುಕೊಳ್ಳಲು ಪ್ರಯತ್ನಿಸಿದ್ದು ತಪ್ಪೆ ?

ಸದ್ಯಕ್ಕೆ ನನ್ನನ್ನು ಜಾಗತೀಕರಣದ ಪರಿಣಾಮವಾಗಿ ಹುಟ್ಟಿದ ಕೂಸೆಂದೂ, ಉದಾರೀಕರಣ ನನ್ನ ತಂದೆ ಎಂದೂ, ಮುಕ್ತ ಮಾರುಕಟ್ಟೆಯಲ್ಲಿ ನನ್ನದೇ ಪ್ರಮುಖ ಪಾತ್ರವೆಂದೂ, ದೇಶದ ಆರ್ಥಿಕ ನೀತಿಯ ಕೊಡುಗೈದಾನಿಯೆಂದೂ ನನ್ನನ್ನು ಸುಮ್ಮನಿರಿಸಿದರು. ರಚ್ಚೆ ಹಿಡಿದ ಮಗುವಿಗೆ ಅಮ್ಮನ ಹುಸಿ ಸಾಂತ್ವನದಂತೆ.

ಅದಾದ ಕೆಲವೇ ದಿನದ ನಂತರ ನನ್ನ ಇನ್ನೊಂದು ಪ್ರಶ್ನೆ ನಾನೇಕೆ ಇಲ್ಲಿಗೆ ಬಂದೆ ???
ಈ ಅನಿರೀಕ್ಷಿತ ಪ್ರಶ್ನೆ ನನಗೇ ಅನಿರೀಕ್ಷಿತವಾಗಿತ್ತು, ವಿಶ್ವದ ಮೂಲೆ ಮೂಲೆಯನ್ನು ಆಕ್ರಮಿಸಿರುವ ನಾನು ಬೇರಾವ ದೇಶದಲ್ಲೂ ಎಂದೂ ಇಂತಹ ಪ್ರಶ್ನೆಯನ್ನು ಕೇಳಿಕೊಂಡಿರಲಿಲ್ಲ, ಮೊದಲ ಸಾರಿ ನನಗೆ ಇಂತಹ ಸನ್ನಿವೇಶ ಎದುರಾಗಿತ್ತು. ಮನಸು ತಪ್ಪು ಮಾಡಿದೆನೆ? ಎಂಬ ಪಾಪಪ್ರಜ್ನೆಯಿಂದ ಬಳಲುತ್ತಿತ್ತು. ಮೊದಲಿನ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕಂಡು ಈ ಪ್ರಶ್ನೆಗಾದರೂ ಉತ್ತರ ಹುಡುಕುವಂತೆ ನನ್ನ ಅಂತರಂಗ ಕೂಡ ಸ್ವಲ್ಪ ಜೋರಾಗೇ ಗುಟುರು ಹಾಕಿತು.

ನಾನು ಭಾರತಕ್ಕೇ ಏಕೆ ಬರಬೇಕಾಯಿತು ??
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ, ಬಹುಜಾತೀಯ, ಬಹುಧರ್ಮ/ಪರಂಪರೆಗಳ ನೆಲೆ, ಸಂಸ್ಕ್ರುತಿಗಳ ಬೀಡು, ಮುಕ್ಕೋಟಿಗೂ ಅಧಿಕ ದೇವರುಗಳುಳ್ಳ, ದೇವರು/ಆಚಾರ/ವಿಚಾರಗಳಲ್ಲಿ ಅಪಾರ ನಂಬಿಕೆಯುಳ್ಳ, ಒಟ್ಟಿನಲ್ಲಿ "ವಿವಿಧತೆಯಲ್ಲಿ ಏಕತೆ" ಎಂಬ ಮಂತ್ರವನ್ನು ಕನಸಿನಲ್ಲೂ ಜಪಿಸುವ ವಿಶಾಲ ಹ್ರುದಯ. ಸಾಲು ಸಾಲು ಅವಿಭಕ್ತ ಕುಟುಂಬಗಳ ಆಗರ.

ಹಸಿವು ಮತ್ತು ಬಡತನವೆಂಬ ರುದ್ರತಾಂಡವವಾಡುವ ಎರಡು ಶತ್ರುಗಳನ್ನು ಬಗಲಲ್ಲೇ ಇಟ್ಟುಕೊಂಡಿದ್ದರೂ ಸ್ವಾಭಿಮಾನಿಗಳಾಗಿ, ಮಗ್ಗುಲಲ್ಲೇ ಬೆಂಕಿಯ ಭೂತವನ್ನು ಇಟ್ಟುಕೊಂಡಿದ್ದರೂ ಶಾಂತಿಪ್ರಿಯರಾಗಿ, ಇತರರಿಗೆ ಮಾದರಿಯಾಗಿದ್ದ ದೇಶವಿದು.ಸುಮಾರು ೮೦೦ ವರ್ಷಗಳ ಕಾಲ ಮುಸ್ಲೀಮರು, ೨೦೦ ವರ್ಷಗಳ ಕಾಲ ಬ್ರಿಟೀಷರ ಕಪಿಮುಷ್ಟಿಯಲ್ಲಿ ಸಿಕ್ಕಿ ನರಳಾಡಿದರೂ, ಇನ್ನೂ ತೇಜೋರೂಪಿಣಿಯಾಗಿ ಕಂಗೊಳುಸುತ್ತಿದ್ದಾಳೆ ನಿಮ್ಮ ಈ ಭಾರತ ಮಾತೆ, ಇದೂ ಕೂಡ ಒಂದು ವಿಸ್ಮಯವೇ ಸರಿ. ತನಗೆ ಕೇಡು ಬಗೆಯುವವರಿಗೂ ಒಳ್ಳೆಯದನ್ನು ಬಯಸುವ ರಾಷ್ಟ್ರವಿದು, ಎಂದು ನನ್ನ ದೇಶದಲ್ಲೂ ಭಾರತಕ್ಕೆ ಅದೇ ಮರ್ಯಾದೆ.

ಜಗತ್ತನ್ನೇ ನಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಡಬೇಕು ಎಂಬ ನನ್ನ ದೇಶದ ಒಂದು ವಿಲಕ್ಷಣ ಬಯಕೆ ಇದೆ, ಅದಕ್ಕಾಗಿ ನಾವು ಏನು ಮಾಡಲೂ ಸಿದ್ಧ ಎಂಬುದನ್ನು ಇಗಾಗಲೇ ನಿಮಗೆ ನಿರೂಪಿಸಿದ್ದೇವೆ, ಅಂದಿನ ಪ್ರಬಲ ರಷ್ಯಾಕ್ಕೆ ಬಿಸಿಮುಟ್ಟಿಸಲು ಬಿನ್ ಲ್ಯಾಡೆನ್ ನನ್ನು ಬೆಳೆಸಿದ್ದು, ನಿಮ್ಮ ಪಕ್ಕದ ದಾಯಾದಿ ತಮ್ಮನಿಗೆ ಪ್ರತಿ ವರ್ಷ ಭಯೊತ್ಪಾದನೆಗೆಂದೇ ಅಭಿವ್ರುದ್ಧಿಯ ನೆಪದಲ್ಲಿ ಆರ್ಥಿಕ ಪ್ಯಾಕೆಜ್ ಪ್ರಕಟಿಸುವುದು, ಅವುಗಳಲ್ಲಿ ಕೆಲವು. ಉಗ್ರವಾದ/ಭಯೋತ್ಪಾದದ ಹುಟ್ಟಿಗೆ ನಮ್ಮ ಕಾಣಿಕೆ ಅಪಾರ, ಆದರೂ ನಾವು ಶಾಂತಿ ಪ್ರಿಯ ಕ್ರಿಸ್ತ ನ ಅನುಯಾಯಿಗಳು ಎಂದೇ ಕರೆಸಿಕೊಳ್ಳಲು ಇಷ್ಟ ಪಡುತ್ತೇವೆ, ಮಗುವನ್ನು ಚಿವುಟುವುದು ನಾವೇ ಅದು ರಚ್ಚೆ ಹಿಡಿದಾಗ ತೊಟ್ಟಿಲು ತೂಗುವುದು ನಾವೇ. ಇದು ವಿಚಿತ್ರವಾದರೂ ಸತ್ಯ.

ನನ್ನ ಆತಂಕಕ್ಕೆ ಕಾರಣವಾಗಿದ್ದೇ ಈ ಮೇಲಿನ ಆಂಶಗಳು, ವ್ಯವಹಾರಿಕತೆಯ ಸೊಂಕು ಎಳ್ಳಷ್ಟೂ ಇರದೇ ಬರೀ ಪ್ರೀತಿ ವಿಶ್ವಾಸವೇ ಜೀವನ ಎಂದು ನಂಬಿರುವ ಭಾರತವೆಲ್ಲಿ, ಹೆಜ್ಜೆ ಹೆಜ್ಜೆಗೂ ಲಾಭದ ಲೆಕ್ಕ ಹಾಕುವ ನಾವೆಲ್ಲಿ.ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಇರಾಕ್ ಮೆಲೆ ದಾಳಿ, ಸೌಥ್ ಆಫ಼್ರಿಕಾದ ಗಣಿ ನಿಕ್ಷೇಪಗಳನ್ನು ಪತ್ತೆ ಹಚ್ಚಿ ಹಣದ ಆಮೀಷ ತೋರಿಸಿ ಅವರದೇ ದೇಶದ ಬಾಲ ಕಾರ್ಮಿಕರ ಸಹಾಯದಿಂದ ಅವರ ದೆಶವನ್ನೇ ಕೊಳ್ಳೆ ಹೊಡೆದ (ಕು)ಖ್ಯಾತಿ ನಮ್ಮದು. ಅಷ್ಟೆಲ್ಲಾ ಬಿಡಿ "ಒಂದು ಪ್ರೀತಿಯ ಸ್ಪರ್ಶದಿಂದ ಎಂತಹ ನೋವನ್ನೂ ಮರೆಸಬಹುದು" ಎಂದ ಮದರ್ ತೆರೆಸಾ ನನ್ನೆ ನಾವು ನಮ್ಮ ಕಾರ್ಯ ಸಾಧನೆಗೆ ಬಳಸಿಕೊಂಡೆವು, ಮಲ ಮೂತ್ರದಲ್ಲೂ ಲಾಭ ಹುಡುಕುವ ಇವರು, ನನ್ನನ್ನು ಪಟ್ಟದರಸನ್ನನ್ನಾಗಿ ಮಾಡಿ ಭಾರತಕ್ಕೆ ಏಕೆ ಕಳಿಸುತ್ತಿದ್ದಾರೆ ಎಂಬುದೇ ನನಗೆ ಆಗ ಯಕ್ಷ ಪ್ರಶ್ನೆಯಾಗಿತ್ತು. ಅಂತಹದೊಂದು ಅಂಜಿಕೆಯಿಂದಲೇ ನಾನು ಇಲ್ಲಿಗೆ ಬಂದೆ.
ಒಂದು ದೇಶದ ಮೇಲೆ ಇಷ್ಟೊಂದು ಆಕ್ರಮಣಗಳಾಗಿಯೂ, ಸಂಪನ್ಮೂಲಗಳ ಕೊಳ್ಳೆ ಹೊಡೆದರೂ, ಇಷ್ಟೊದು ಬಡವರಿದ್ದರೂ ಇನ್ನೂ ಈ ದೇಶದಲ್ಲಿ ಆಮಿಶಗಳಿಗೆ ತಡೆಯೊಡ್ಡೂತ್ತಿರುವ ಶಕ್ತಿ ಯಾವುದು ? ಅದುವೇ ಧರ್ಮ, ಸಂಸ್ಕ್ರುತಿ, ಆಚಾರ, ವಿಚಾರಗಳು. ಯುವಜನಾಂಗ ಇವೆಲ್ಲವುಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ, ಭದ್ರವಾಗಿರುವ ಧಾರ್ಮಿಕ ಬೇರುಗಳನ್ನು ಸಡಿಲಿಸುವಂತೆ/ಕಿತ್ತೊಗುವಂತೆ ಮಾಡುವ ಮನೆಹಾಳು ಕೆಲಸದ ಪ್ರತಿನಿಧಿಯಾಗಿ ನನ್ನನ್ನು ಕಳಿಸಲಾಯಿತೇ ?

ನಾನಿಲ್ಲಿ ಬಂದದ್ದೇ ತಡ, ಇಲ್ಲಿನ ಯುವ ಜನಾಂಗ ಭೂತ ಭವಿಷ್ಯಗಳ ಹಂಗಿಲ್ಲದೇ ಬರೀ ವರ್ತಮಾನದಲ್ಲಿ ಬದುಕುತ್ತಿದ್ದಾರೆ, ನಾ ತಂದ ಮುಖವಾಡವನ್ನೇ ಹಾಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ, ಭಾವುಕತೆಯ ನೆರಳೂ ಕೂಡ ನೊಡದಂತೆ ವರ್ತಿಸುತ್ತಿದ್ದಾರೆ, ಹಿಂದಿನ ನಂಬಿಕೆಗಳು, ಮೌಲ್ಯಗಳು ಈಗ ಅಪ್ರಸ್ತುತ ವಾಗುತ್ತಿವೆ, ನನ್ನದೇ ಹೆಸರಿನಿಂದ ಉದ್ಯೋಗ, ಕೈ ತುಂಬಾ ಹಣ ಗಳಿಸುತ್ತಿದ್ದಾರೆ ಅದನ್ನು ನಮ್ಮ ದೇಶದವರಂತೆಯೇ ಚೆಲ್ಲು-ಚೆಲ್ಲಾಗಿ ಖರ್ಚುಮಾಡುತ್ತಿದ್ದಾರೆ, ಓದಿನಲ್ಲಿಯೂ ಮೊದಲಿನ ಶ್ರದ್ಧೆಯಾಗಲೀ ಆಸಕ್ತಿಯಾಗಲೀ ಇಲ್ಲ, ಅವಿಭಕ್ತ ಕುಟುಂಬದ ಕಲ್ಪನೆಯೇ ಮಾಯವಾಗುತ್ತಿದೆ. ಒಂದು ದೇಶ ಧರ್ಮಶೂನ್ಯವಾಗಲು, ಅಭಿಮಾನಶೂನ್ಯವಾಗಲೂ ಇಷ್ಟು ಸಾಕಲ್ಲವೇ ?

ಹೌದು, ನಿಜವೋ ಸುಳ್ಳೋ ಅಂತದ್ದೊಂದು ಸಂಶಯ ನನ್ನಲ್ಲಿ ಮೊಳಕೆಯೊಡೆಯತೊಡಗಿತು "ಒಂದು ದೇಶ ಆರ್ಥಿಕವಾಗಿ ದಿವಾಳಿಯಾದರೆ ಸರಿಮಾಡಬಹುದು ಆದರೆ ಅದರ ಸಂಸ್ಕ್ರುತಿ ದಿವಾಳಿಯಾದರೆ ? " ಅದು ಇನ್ನೊಂದು ಸಂಸ್ಕ್ರುತಿಗೆ ನಾಂದಿಯಾಗುತ್ತದೆ, ಹಾಗಾದರೆ ನಾನು ಇನ್ನೊಂದು ಸಂಸ್ಕ್ರುತಿಯನ್ನು ಪ್ರತಿಷ್ಠಾಪಿಸಲು ಬಂದಿರುವ ರಾಯಭಾರಿಯೆ ?
ಕೆಲವೇ ದಿನಗಳಲ್ಲಿ ವ್ಯವಸ್ಥಿತ ಹುನ್ನಾರದ ವಾಸನೆ ನನಗೆ ಬಡಿಯಲಾರಂಭಿಸಿತು, ಮನದ ಮೂಲೆಯಲ್ಲಿ ವಿಶಾದ ಗೀತೆ "ನಾನಾರೆಂಬುದು ನಾನಲ್ಲ" ನಾನು ಬೆರೊಂದು ಕೆಲಸ ಸಾಧನೆಗೆ ಉಪಯೊಗಿಸಿಕೊಳ್ಳುತ್ತಿರುವ ವಸ್ತು ಎಂದು ಮನಸ್ಸು ಒತ್ತಿಹೇಳುತ್ತಿತ್ತು. ಇದು ನಿಜವೇ ಆಗಿದ್ದಲ್ಲಿ ಇಂತಹದ್ದೊಂದು ಧಾರ್ಮಿಕ ವ್ಯಭಿಚಾರಕ್ಕೆ ನನ್ನ ಧಿಕ್ಕಾರವಿರಲಿ ಎಂದೂ ಮನಸ್ಸು ಕೂಗಿ ಹೆಳುವಂತಾಯ್ತು. ಆದರೆ ನನ್ನದೂ ಕೂಡ ಮೂಕ ಹಕ್ಕಿಯ ಮೌನ ರಾಗವೇ ಅಲ್ಲವೇ ???... ಪಕ್ಕದ ಏಸುವಿನ ಪ್ರತಿಮೆಯ ಮುಖದಲ್ಲಿ ಮಂದಹಾಸದ ನಗುವಿತ್ತು, ಶಿಲುಬೆ ಅಳುಗಾಡುತ್ತಾ ನಿಮ್ಮನ್ನೆಲ್ಲ ಆಹ್ವಾನಿಸಿದಂತಾಯ್ತು...

ಸದ್ಯದ ನನ್ನ ಹೆಸರು : ಸಾಫ಼್ಟವೇರ್ ಇಂಜಿನಿಯರ್
ನನ್ನ ದೇಶ: ಸ್ವಯಂಘೋಷಿತ ಭುಲೋಕದ ಸ್ವರ್ಗ "ಅಮೇರಿಕ"

ಮಾನಸವಾಣಿಯಿಂದ:
-ಚಂದ್ರು
csbyadgi@gmail.com

Monday, June 29, 2009

ನಾ ಬರೆದ ಕಾವ್ಯ...

ನಾ ಬರೆದ ಕಾವ್ಯ, (ಕಾವ್ಯವೇ... ಎಂಬ ಜಿಜ್ನಾಸೆ ನನ್ನಲ್ಲಿ ಇನ್ನೂ ಕಾಡುತ್ತಿದೆ)
ಎಂದೋ ಒದಿದ ಒಳ್ಳೆ ಕವಿತೆಗಳಿಂದ ಸ್ಪೂರ್ತಿಗೊಂಡು, ನನ್ನಲ್ಲೂ ಹುಟ್ಟಿದ ಮಾನವ ಸಹಜ
ಬಯಕೆಗೆ ನೀರೆರೆದು ಪೊಷಿಸಿದಾಗ ಹುಟ್ಟಿದ ಬ್ರೂಣಾವಸ್ಥೆಯ ಶಿಶು.

ನನ್ನ ಈ ಬಹುದಿನಗಳ "ಕಾವ್ಯಮಿಮಾಂಸೆಯ" ಪ್ರಸವ ವೇದನೆಯನ್ನು ಕೆಳಗಿನ ಕಾವ್ಯಗಳಿಂದ ಪೂರ್ಣಮಾಡಿಕೊಳ್ಳುತ್ತಿದ್ದೇನೆ, ಇದು ಗರ್ಭಪಾತವೊ..ಸರಳ ಹೆರಿಗೆಯೋ ಎಂಬ ತೀರ್ಪು ನಿಮ್ಮದು. ತುಂಬು ಹ್ರುದಯದಿಂದ ಸ್ವೀಕರಿಸುತ್ತೀರೆಂಬ ನಂಬಿಕೆ ಮಾತ್ರ ನನ್ನದು.

ಮನೆವರೆಗೆ ಬಂದವಳು ಮನೆಯೊಳಗೂ(ಮನದೊಳಗೂ ?) ಬಂದಳು ಎನ್ನುವಂತೆ..
ಮನದೊಳಗೆ ಮೂಡಿದ ದ್ರುಶ್ಯಕ್ಕೆ, ಕಾವ್ಯ ಸ್ಪರ್ಶ ಕೊಟ್ಟಿದ್ದೇನೆ.

ವಿಮರ್ಶೆಯು ವ್ಯಕ್ತಿಯ ಮೊದಲಿನ ತಪ್ಪಿನ ಪುನರಾವರ್ತನೆಯನ್ನು ತಪ್ಪಿಸುತ್ತದೆ, ಭವಿಷ್ಯದ ಕೆಲಸಗಳಿಗೆ ಎಚ್ಚರಿಸುತ್ತದೆ, ಮುಂದಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ,ಮತ್ತು ಸ್ರುಜನಶೀಲತೆ ಹಾಗೂ ಕ್ರಿಯಾಶೀಲತೆಗೆ ಉತ್ತೇಜಿಸುತ್ತದೆ.ಒಟ್ಟಿನಲ್ಲಿ ವ್ಯಕ್ತಿಯ ಏಳ್ಗೆಗೆ ವಿಮರ್ಶೆ ಸಹಕಾರಿ. ದಯವಿಟ್ಟು ಸಹಕರಿಸಿ.


ನೀನ್ಯಾರೆ ?

ನಿನ್ನದೊಂದು ನೆನಪು, ಮುಂಗಾರು ಮಳೆಯಲ್ಲಿ ಮಿಂದೆದ್ದ ಅನುಭವ
ನಿನ್ನದೊಂದು ಕನಸು, ಸಿಹಿ ಸಂಜೆಯಲಿ ತಂಗಾಳಿ ಸ್ಪರ್ಶಿಸಿದ ಕಲರವ

ಮಲೆನಾಡ ಸಿರಿಯೂ ಮರುಳಾಗಿ ನಿಂತಿದೆ ನಿನ್ನ ರೂಪ ರಾಶಿಗೆ
ಬರುಡಾದ ಮನಸು ಹಸಿರಾಗಿ ಮಾಗಿದೆ ಸೌಂದರ್ಯ ಸೊಬಗಿಗೆ

ಕಹಿ ಬೇವು ಕೂಡ ಸಿಹಿಯೆನಿಸಿದೆ, ನಿನ್ನ ನೆನೆದ ಆ ಕ್ಷಣ
ಕ್ಷಣ ಕೂಡ ಯುಗವಾಗಿ ವಿರಹಿಸಿದೆ, ನೀನಿಲ್ಲದ ಈ ಕ್ಷಣ

ನೀ ನಡೆವ ಹಾದಿಯಲಿ ಕನಸಲ್ಲೂ ಜೊತೆಯಿರುವೆ
ನೆರಳಂತೆ ಹಿಂಬರುವೆ ನೆರಳಾಗಿ ಹಿತಕೊಡುವೆ

ಬರಿದಾದ ಮನಸಲ್ಲಿ ಭಾವನೆ ತರಿಸಿದವಳೆ
ಮರುಭೂಮಿ ಬಿಸಿಲಲ್ಲೂ ತಂಪು ಸುರಿಸುವವಳೆ...

ಮಿಂಚಾಗಿ ಬಂದೆ, ಮಿಂಚಂತೆ ಹೋದೆ.... ನೀನ್ಯಾರೆ ?



"ಅಮ್ರುತಘಳಿಗೆ"

ನನ್ನವಳು ನನ್ನೆದುರು ನಸುನಗುತ ನಿಂತಾಗ...

ಮುದ್ದಾದ ಮುಖದಲ್ಲಿ ಮಂದಹಾಸ ತೇಲಿಬಂತು
ನಾಚಿಕೆಯು ಮೈದುಂಬಿ ಅಪ್ಸರೆಯ ನಾಚಿಸಿತು

ಕಣ್ಣು ನೋಟ ಬೀರಿತು, ರೆಕ್ಕೆ ಬಡಿದು ಸಮ್ಮತಿ ನೀಡಿತು
ಮುಂಗುರುಳು ಕೂಡ ಮುಂಚಾಚಿ ಶುಭಕೋರಿತು

ಧರೆ ಕೂಡ ತಂಪಾಗಿ ತಂಗಾಳಿ ತೇಲಿ ಬಂತು
ಬಾನಿಂದ ಮೊಡ ಕರಗಿ ಮಳೆಯಾಗಿ ಸಿಂಚಿಸಿತು

ಹಗಲಲ್ಲೂ ಶಶಿಗೆ ಸ್ಪರ್ಶಿಸುವ ಮನಸಾಯ್ತು
ಭಾಸ್ಕರನ ಬೇಗ ಬರುವಂತೆ ಭಿನ್ನವಿಸಿತು

ಮಣಭಾರ ಮನಸು ನವಿರಾಗಿ ತಿಳಿಯಾಯ್ತು
ಜೀವ ಕಾವ್ಯ ಬರೆಯಿತು, ಕಾವ್ಯ ನನ್ನವಳ ಕಣ್ಸೆಳೆಯಿತು

ಹುದುಗಿಟ್ಟ ಪ್ರೀತಿಯ ಮನಸು ತೆರೆದಿಟ್ಟಿತು
ಜೊಡಿ ಜೀವಗಳ ಜೀವನ ಶುರುವಾಯಿತು


ಮಾನಸವಾಣಿಯಿಂದ:
-ಚಂದ್ರು
csbyadgi@gmail.com









sooryasta

sooryasta

Followers