Tuesday, November 3, 2009

ಉಳುವಾ ನೇಗಿಲಯೋಗಿಯ ಬಾಳು, ಕೊನೆಕಾಣದ ಗೋಳು....


ಉಳುವಾ ನೇಗಿಲಯೋಗಿಯ ಬಾಳು, ಕೊನೆಕಾಣದ ಗೋಳು....


ಆತ್ಮಿಯ ಬಾಂಧವರೇ,
ನಿಮಗೆಲ್ಲಾ ಗೊತ್ತಿರುವಂತೆ ಉತ್ತರ ಕರ್ನಾಟಕವಿಂದು ನಾವೆಂದೂ ಕಾಣದ/ಊಹಿಸದ/ಬಯಸದ ಪ್ರಕೃತಿ ಮಾತೆಯ ಮುನಿಸಿಗೆ ತುತ್ತಾಗಿ ತತ್ತರಿಸಿ ಹೋಗಿದೆ.
ತನ್ನೆಲ್ಲ ಮುನಿಸಿಗೂ ತಾನು ಬಯಸುವ ಬಲಿ ಅಮಾಯಕರು ಮತ್ತು ಬಡವರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ ಆ ಪ್ರಕೃತಿ ಮಾತೆ. ಅವರ ಯಾತನೆ, ರೋದನೆಗಳೇ ಅವಳಿಗೆ ಅಪ್ಯಾಯಮಾನವೆನಿಸಿವೆನೋ ಯಾರು ಬಲ್ಲರು? ಅಮಾಯಕರ ಬಾಳನ್ನು ಮೂರಾಬಟ್ಟೆ ಮಾಡಿ ಗಹ ಗಹಿಸಿ ನಗುವುದೇ ಅವಳ ಒಂದಂಶದ ಕಾರ್ಯವಾಗಿದೆ. ಸಂಪತ್ತನ್ನೆಲ್ಲ ಲೂಟೆ ಹೊಡೆಯುವ ಕಳ್ಳ ಖದೀಮರೆಲ್ಲ ಅವಳ ಗಮನಕ್ಕೇ ಬರುವುದಿಲ್ಲ.

ಅದೆಲ್ಲ ಇರಲಿ, ಅತಿವೃಷ್ಟಿಯೆಂಬ ಪ್ರಕೃತಿ ವಿಕೋಪದ ಬ್ರಹ್ಮ-ರಾಕ್ಷಸನ ಕೆಂಗಣ್ಣಿಗೆ ಗುರಿಯಾಗಿ, ದೇಶದ ಬೆನ್ನುಲುಬಾಗಿರುವ ರೈತನ ಬೆನ್ನುಲುಬು ಮುರಿದು ಹೋಗಿದೆ, ಸಾಲು ಸಾಲು ಕಷ್ಟಗಳ ಸುಳಿಗೆ ಸಿಲುಕಿ ನಾಳೆಗಳ ಬಗೆಗಿನ ನಂಬಿಕೆಯೇ ಅವನಿಗೆ ಕಮರಿ ಹೋಗಿದೆ,

ಬನ್ನಿ ಅವನ ಒಡಲಾಳದಲ್ಲೊಂದು ಭರವೆಸೆಯೆಂಬ ಚೈತ್ರದ ಹಸಿರು ಟಿಸಿಲೊಡೆಯುವಂತೆ ಮಾಡೋಣ, ಬತ್ತಿದ ಮನಸ್ಸಿನ ಒಳಗೊಂದು ಆಸೆಯ ಬೀಜ ಬಿತ್ತೋಣ, ಮುದುಡಿದ ಹೂ ಅರಳಿಸೋಣ, ಎದೆಯೊಳಗೊಂದು ಆಶಾಕಿರಣದ ಕಳಶ ಗೋಪುರ ಕಟ್ಟೋಣ.

ಶತಮಾನಗಳಿಂದ ಭೂಲೋಕಕ್ಕೆಲ್ಲ ಅನ್ನಸಂತರ್ಪಣೆಗೈದು ಹಸಿವು ನೀಗಿಸಿದ ಆ ಭೂಮಿ-ಪುತ್ರನ ಕೈ ಹಿಡಿದು ಮೇಲೆಬ್ಬಿಸಿ, ಪ್ರಕೃತಿಗೂ ಎದೆ ಸೆಟೆದು ಸವಾಲೆಸೆಯುವಂತೆ ಮಾಡೋಣ. ನಕ್ಷತ್ರಗಾಹಿಯಾಗಿರುವ ಅವನ ತಕ್ಷಣದ ಬಯಕೆಗಳಿಗೆ ಸ್ಪಂದಿಸೋಣ. ಒಂದು ಕಾಲದ ನಮ್ಮೆಲ್ಲರ ಸೂರು ಮತ್ತು ಬೇರಾಗಿದ್ದ ಕೃಷಿಯನ್ನು ಪೊರೆದು ಪೋಷಿಸುತ್ತಿರುವ ರೈತನ ಬಾಳನ್ನು ಮತ್ತೆ ಕಟ್ಟಿಕೊಡಲು ಶಕ್ತಿಮೀರಿ ಪ್ರಯತ್ನಿಸೋಣ

ಹಾಗಾದರೆ ನಾವು ಏನು ಮಾಡಬೇಕು ?

೧) ಬೇಡುವ ಕೈಗಳು ಸ್ವಚ್ಚವಾಗಿದ್ದರೆ ಕೊಡುವ ಕೈಗಳಿಗೆ ಎಂದೂ ಬರವಿಲ್ಲ. ನಿಮ್ಮ ಸ್ನೇಹಿತರ ಗುಂಪುಕಟ್ಟಿಕೊಂಡು ಅವರಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಕೊಟ್ಟು ಸಾಧ್ಯವಾದಷ್ಟು ಹಣವನ್ನು ತಕ್ಷಣವೇ ಜಮೆ ಮಾಡಲು ಹೇಳಿ,ನಂತರ ನೀವು ಹಣವನ್ನು ಸಮೀಪದ ಸಂತ್ರಸ್ತರೊಡನೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ, ಅಥವಾ ಮಠ ಮಾನ್ಯಗಳಿಗೆ ಕೊಡಿ

೨) ನಿಮ್ಮ ಆಫೀಸಿನ ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ ಅಥವಾ ಸಂಬಂಧಪಟ್ಟವರಿಗೆ ಹೇಳಿ ಆಫೀಸಿನ ಎಲ್ಲ ಸಹೋದ್ಯೊಗಿಗಳಿಗೂ ಸಹಾಯ ಕೇಳಿಕೊಂಡು ಮೇಲ್ ಕಳಿಸಲು ಹೇಳಿ ಅಥವಾ ಸಹೋದ್ಯೋಗಿಗಳ ಮಾಸಿಕ ವೇತನದ ಸ್ವಲ್ಪ ಭಾಗವನ್ನು ಅವರೇ ತೆಗೆದುಕೊಂಡು ಸಂತ್ರಸ್ತರಿಗೆ ಕೊಡಲು ಹೇಳಿ ಇಂತಹ ಸಂದರ್ಭಗಳಲ್ಲಿ ಯಾರೂ ಅದಕ್ಕೆ ವಿರೋಧಿಸುವುದಿಲ್ಲ

೩) ನಿಮಗೆ ಸದ್ಯಕ್ಕೆ ಆಫೀಸಿನಲ್ಲಿ ಯಾವುದೇ ಕೆಲಸದ ಒತ್ತಡವಿಲ್ಲದಿದ್ದರೆ, ನಾಲ್ಕಾರು ದಿನದ ಮಟ್ಟಿಗೆ ಹೋಗಿ ಸಂತ್ರಸ್ತರಿಗೆ ಸೂರು ಕಟ್ಟಿಕೊಡಲು ನೆರವಾಗಿ

೪) ನಿಮಗೆ ಯಾವುದೇ ತರನಾದ ಸಹಾಯ/ನೆರವು ಮಾಡಬೇಕೆನಿಸಿದರೂ ಉದಾಸೀನ ಬೇಡ ದಯವಿಟ್ಟು ತಕ್ಷಣವೇ ಮಾಡಿ

ಮಾನವೀಯ ಅಂತಃಕರಣವಿರುವ ಯಾರೂ ಇದನ್ನು ಹಗುರವಾಗಿ ಭಾವಿಸುವುದಿಲ್ಲವೆಂಬುದು ನಮ್ಮ ನಂಬಿಕೆ ಮತ್ತು ಸಾಧ್ಯವಾದಷ್ಟು ನಿಮ್ಮ ಮಿತ್ರರಿಗೂ ಇದನ್ನು ತಿಳಿಸಿಹೇಳಬೇಕೆಂಬುದು ನಮ್ಮೆಲ್ಲರ ಬಯಕೆ.

ನೆನಪಿರಲಿ : ನಿಮ್ಮ ಅಳಿಲು ಗಾತ್ರದ ಸೇವೆಯೂ ಕೂಡ, ನೆರೆಯ ಆರ್ಭಟಕ್ಕೆ ಬಳಲಿ ಬೆಂಡಾಗಿರುವ ಸಂತ್ರಸ್ತರಿಗೆ ಸಂಜೀವಿನಿ ಮಾತ್ರೆ ಯಾಗಬಹುದು. ನಮ್ಮೆಲ್ಲರ ಉಳುವಿಗಾಗಿ ದಿನವೆಲ್ಲ ದಣಿವಿಲ್ಲದೇ ದುಡಿಯುವ ಕೈ ಗಳಿಗೆ ಸಹಾಯ ಮಾಡಲು ಸಿಕ್ಕ ಸುವರ್ಣ ಅವಕಾಶವನ್ನು ದಯವಿಟ್ಟು ಹಾಳುಮಾಡಿಕೊಳ್ಳಬೇಡಿ

ರೈತನೆದ್ದರೆ ದೇಶ ಎದ್ದಂತೆ....

ಮಾನಸವಾಣಿಯಿಂದ,
-ಚಂದ್ರು

No comments:

Post a Comment

sooryasta

sooryasta

Followers