Monday, August 3, 2009

"ಪಂಚಮ"ವೇದಿನಿ

          ಬೆಳ್ಳಕ್ಕಿ ಕೂಡ ಬೆರಗಾಗಿ ನೋಡುವ ಬೆಳ್ಳನೆಯ ಚೆಲುವೆಯೊಬ್ಬಳು, ಸರಿರಾತ್ರಿಯಲಿ ತಿಳಿಮೋಡದೊಳಗಿನ ಮಿನುಗು ನಕ್ಷತ್ರದಾ "ನಗು"ವ ಕಣ್ತುಂಬಿಸಿ, ಸವಿ"ಮಾತಿ"ನಾ ಲಹರಿಯನು ಮನದೊಳಗೆ ನುಡಿಸಿ, ಲಘು "ಸ್ಪರ್ಶ"ದಾ ಮೋಡಿಯಲಿ ನವಿರೇಳಿಸಿ, ಹೂ "ಮುತ್ತಿ"ನಾ ಜೋಮಿನಲಿ ತೇಲಿಸಿ, ಬಾಣದ "ನೋಟ"ವನು ಎದೆಗೆರಚಿ, ಯುವಕರಿಗೆಲ್ಲ ಕಿಡಿ ಹಚ್ಚಿ ಹೊತ್ತಿಸುವ ಪಂಚಮೃತಗಳನ್ನು ನಾ ಕಂಡಂತೆ ವರ್ಣಿಸಿದಾಗ...       

       "ಪಂಚಮ"ವೇದಿನಿ      
ಒಂದು ನಗು:
            ಬೆಳದಿಂಗಳೇ ಬಾಡಿ ಕಳೆಗುಂದಿದಂತಾಯ್ತು
            ಕ್ಷೀರಸಾಗರವದು ಧುಮ್ಮಿಕ್ಕಿ ಹರಿದಂತಾಯ್ತು
            ಮಲ್ಲಿಗೆಯ ರಾಶಿಯನು ಧರೆಗೆರಚಿದಂತಾಯ್ತು
            ನಿನಗಿಂತ ಸುಂದರಿ, ನಿನ್ನ ನಗುಮುಖದ ಕಿನ್ನರಿ
            ನನಗಂತೂ ನೋಟವದು ಚಿರನೂತನವೇ ಸರಿ   
            ಹೊರಬಂದು ನಕ್ಕೀಯೆ ಇರುಳು ಹೊತ್ತಿನಲಿ  
            ನೇಸರನೆದ್ದುಬಿಟ್ಟಾನು ಬೆಳಗಾಯಿತೆಂಬ ಭ್ರಮೆಯಲಿ 

ಒಂದು ಮಾತು:
            ಸಿಹಿ ಸಂಜೆಯಲಿ ಇಂಪಾದ ಗಾನಮ್ರುತ ಪಠಣ
            ಶಾಂತ ಸರೋವರದಲಿ ತಂಪಾದ ಪಯಣ   
            ಹಿತವಾದ ಮನಸ್ಸಿಗೆ ಸಿಹಿಯಾದ ಸುಕ್ಷಣ 
            ಮುಂಜಾನೆ ಮಂಜಲಿ ಹಸಿರಾದ ಹಾಸಲಿ 
            ಚಂಚಲಿಸಿ ನರ್ತಿಸಿತು ಮನಸೆಂಬ ನವಿಲು       
            ಸುಖ ನುಡಿವ ಶಕುನದ ಹಕ್ಕಿ, ಇಣುಕಾಡಿ 
            ಆಲಿಸಿತು ನಿನ್ನೀ ಮಧುರ ಕಂಠದ ಉಯಿಲು   

ಒಂದು ಸ್ಪರ್ಶ:
            ಸಂಜೀವಿನಿ ಮಾತ್ರೆ ಬಳಲಿದಾ ಭಾವನೆಗಳಿಗೆ    
            ಚೈತನ್ಯದಾ ಚಿಲುಮೆ ಸೊರಗಿದಾ ಮನಸಿಗೆ 
            ಮಾತೆಲ್ಲ ಮರೆಯಾಯ್ತು, ಮನಸೆಲ್ಲ ಸೆರೆಯಾಯ್ತು
            ನೀಳುಸಿರು ಒಳಹೊಗಿ ನರವೆಲ್ಲಾ ಬಿಗಿಯಾಯ್ತು 
            ಆಂತರ್ಯದಾಳದಲಿ ಸಂಭ್ರಮದ ಹಕ್ಕಿ ಗರಿಬಿಚ್ಚಿ ಹರ್ಷಿಸಿತು   
            ಭಾವನೆಗಳ ಮಹಾಪೂರ ಕಟ್ಟೆಯೊಡೆದು ಹೊರಚೆಲ್ಲಿತು 

ಒಂದು ಮುತ್ತು: 
            ರೋಮಾಂಚನದ ಪರೀಧಿ ಎಲ್ಲೆ ಮೀರಿ ಹರಿದಾಡಿತು
            ಸುವಾಸನೆಯ ಸೊಡರು ಘಮಘಮಿಸಿ ಮತ್ತೇರಿಸಿತು     
            ಚೆಲುವೆಲ್ಲ ಬಸಿದ ಸಿಹಿಜೇನ ಸವಿದು
            ಅಧರ್ರಾಮೃತವು ಕಂಪಿಸಿತು ಸವಿತುಟಿಯ ಮೇಲೆ 
            ನರ ನಾಡಿ ಬಿಸಿಯುಕ್ಕಿ, ಧಮನಿಗಳು ರಭಸವಿಕ್ಕಿ
            ನಶೆಯೇರಿದಾ ಮನಸಿನಾ ತುಂಬೆಲ್ಲ ಅಮಲೇ    

ಒಂದು ನೋಟ:
           ವೈರಾಗಿಯೂ ಕವಿಯಾಗಿ ಪ್ರೇಮ ಕವನ ಬರೆದಾನು
           ನೊಟದಾ ಮೋಡಿಗೆ ಮರುಳಾಗಿ ಮೊರೆಯಿಟ್ಟಾನು 
           ನೆಟ್ಟನೆಯ ನೋಟಕೆ ಶಿಲೆಯಲ್ಲಾ ಜೀವತಳೆಯಿತು
           ಕಾನನದ ಗಿಡವೆಲ್ಲ, ಹಸಿರಿಂದ ಚಿಗುರೊಡೆಯಿತು
           ತಪಗೈವ ಯೋಗಿ ತಪಭೋಗ ತ್ಯಜಿಸಿ
           ಚೆಲುವಯನರಿಸುತ ಹೊರಟ ನಿನ್ನ ಪೂಜಿಸಿ    


ಮಾನಸವಾಣಿಯಿಂದ,
-ಚಂದ್ರು
csbyadgi@gmail.com

1 comment:

  1. ಒಳ್ಳೆ ಪ್ರಯತ್ನ...."ಒಂದು ನಗು"ವಿನಲ್ಲಿರುವ ಸಾಲುಗಳು ಚನ್ನಾಗಿದೆ....

    .....ಸ್ವಾಮಿ..........

    ReplyDelete

sooryasta

sooryasta

Followers