Thursday, August 6, 2009

-:ಆಗುಂತಕನ ಕಾಣದ ಇನ್ನೊಂದು ಮುಖ :-

ಮುನ್ನುಡಿ:
ನಾವೆಷ್ಟೇ ಬಲವಾಗಿ ವಿರೋಧಿಸಿದರೂ ಅದೊಂದು ಪಾತ್ರ ನಮ್ಮಲ್ಲಿ ಹುಟ್ಟಿಸಿದ ಕಂಪನ ಮಾತ್ರ ಜೋರಾಗಿಯೇ ಸದ್ದು ಮಾಡಿದೆ. "ಆಗುಂತಕನ ಆಡದ ಮಾತುಗಳು" ಅಂಕಣದಲ್ಲಿ ಆ "ಸಾಫ್ಟ್ ವೇರ್ ಇಂಜಿನಿಯರ್" ಪಾತ್ರದ ಒಂದು ಮುಖದ ಬಗ್ಗೆ ಮಾತ್ರ ಬರೆದಾಗ, ಮನಸ್ಸಿನಲ್ಲಿ ನಾನೆಲ್ಲೋ ಕೆಲವೊಂದು ವಿಚಾರಗಳನ್ನು ಉದ್ದೇಶಪೂರ್ವಕವಾಗಿಯೇ ಬದಿಗಿರಿಸಿ ಏಕ-ಮುಖವಾಗಿ ಬರೆಯುತ್ತಿದ್ದೇನೆ ಎನಿಸುತ್ತಿತ್ತು, ಈ ಲೇಖನವನ್ನು ಬರೆಯುವ ಮೂಲಕ ಆ ಪಾಪ-ಪ್ರಜ್ನೆ ನನ್ನಲ್ಲಿ ದೂರವಾಯಿತು. ಆ ಪಾತ್ರದ ಉದ್ದೇಶ ಎಷ್ಟೇ ದುರಾದೃಷ್ಟಿಯಿಂದ ಕೂಡಿದ್ದರೂ ಕೆಲವೊಂದು ಸಮಾಜಮುಖಿ ಕ್ರಾಂತಿಗಳಾಗಿವೆ, ಅವುಗಳನ್ನು ನಾನು ಪ್ರಸ್ತಾಪಿಸದಿದ್ದರೆ ನಾನು ಬರವಣಿಗೆಗೂ ಮತ್ತು ಒದುಗರಿಗೂ ಮೋಸಮಾಡಿದಂತಾಗುತ್ತದೆ. ಹೆಣ್ಣನ್ನು ಹಡೆಯುವುದೇ ಪಾಪ ಎಂದು ತಿಳಿದುಕೊಂಡಿದ್ದರು, ಯಾವ ಶಾಲೆಯ ಶಿಕ್ಷಣವಾಗಲಿ, ಜಾಗೃತಿ ಆಂದೋಲನಗಳಾಗಲಿ, ದೃಶ್ಯ/ಶ್ರವಣ/ಬರಹ ಮಾಧ್ಯಮಗಳಾಗಲೀ ಏನೂ ಪ್ರಭಾವ ಬೀರಿರಲಿಲ್ಲ. ಜಾಗತೀಕರಣದಿಂದ ಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿಗೆ ಈಗ ಎಲ್ಲವನ್ನೂ ದೂರ ಮಾಡಿದೆ. ಎನೊ ಸ್ವಲ್ಪ ಕಲಿಸಿದರೆ ಅವಳ ಜೀವನ ಅವಳು ನೋಡಿಕೊಳ್ಳುತ್ತಾಳೆ ಎನ್ನುವ ಬಲವಾದ ನಂಬಿಕೆ ಅವಳ ಹೆತ್ತವರಿಗೆ ಬಂದುಬಿಟ್ಟೀದೆ. ಮಗ ಅಪಾ-ಪೋಲಿಯಾಗಿ ತಿರುಗಾಡುವಾಗ ತಂದೆಗೆ ಎಲ್ಲಿಲ್ಲದ ಯೋಚನೆಯಿರುತ್ತಿತ್ತು, ಆದರೆ ಈಗ ಒಂದು ಕೆಲಸ ಸಿಕ್ಕ ತಕ್ಷಣ ನಿರುಮ್ಮುಳವಾಗಿದ್ದಾನೆ.

ಇನ್ನು ಹದಿಹರೆಯದ ವಯಸ್ಸಿನಲ್ಲಿ ಕೈತುಂಬ ದುಡ್ಡು ಸಂಪಾದನೆ ಮಾಡುವಾಗ ಮನಸ್ಸು ಬೇರೆಡೆ ಹೊರಳುವುದು ಸಹಜ, ಅದಕ್ಕೆ ನಾವು ಬೇಲಿ ಹಾಕಬೇಕು. ಒಂದು ಮಾತಿದೆ ಹಣ ಮಾತನಾಡಲು ಶುರು ಮಾಡಿದರೆ ಸತ್ಯ ಸುಮ್ಮನಾಗುತ್ತದೆಯಂತೆ. ಅಲ್ಪನಿಗೆ ಐಷ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಬಹುಶಃ ಇಲ್ಲೂ ಅದೇ ಕಥೆಯಾಗಿರಬಹುದು. ಸರಿಯೋ/ತಪ್ಪೋ,ಒಳ್ಳೆಯದೋ/ಕೆಟ್ಟದ್ದೋ, ಬೇಕಿತ್ತೋ/ಬೇಡವಿತ್ತೋ ನಾವು ಜಾಗತೀಕರಣದ ನೌಕೆಯನ್ನು ಹತ್ತಿಯಾಗಿದೆ, ರಾತ್ರೋ ರಾತ್ರಿ ನಾವು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿಲ್ಲ ಇರುವುದರ ಜೊತೆಗೆ ಸಾಗಿ ಕಳೆದದ್ದನ್ನು ಪಡೆದುಕೊಳ್ಳುವುದು ಸೂಕ್ತ. ನನ್ನ ಉದ್ದೇಶ ಇಷ್ಟೆ ಬರೀ ಹೊರಗಿನ ಶಕ್ತಿಗಳು ಬಂದು ಹೀಗಾಯಿತು ಎಂದು ರೋದಿಸುವುದಕ್ಕಿಂತ, ಎಲ್ಲೊ ನಮ್ಮ ವ್ಯವಸ್ಥೆಯಲ್ಲೂ ತಪ್ಪಿದೆ ಅದನ್ನು ಸರಿಗಾಣಿಸುವ ಇಚ್ಚಾಶಕ್ತಿ ಕೊರತೆ ನಮ್ಮಲಿಯೂ ಇದೆ, ಅದನ್ನು ಅರಿತು ಮುನ್ನಡೆಯಬೇಕಾಗಿದೆ.

ಮರೆತ ಮಾತು:
ಬರವಣಿಗೆ ಮತ್ತು ಓದು ನನ್ನ ಪ್ರವೃತ್ತಿಗಳು ಎಂದು ತಿಳಿದು, ನನ್ನಲ್ಲಿರುವ ಬರಹಗಾರನನ್ನು ಹೊರತೆಗೆದು ನನಗೆ ಬರೆಯಲು ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಹಿರಿಯ ಸ್ನೇಹಿತ ಸುರೆಶ್ ನರಸಿಂಹರಿಗೆ ಈ ಹೊತ್ತಿನಲ್ಲಿ ವಿಶೇಷ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ. ನನ್ನಲ್ಲಿರುವ ಪುಸ್ತಕ ವ್ಯಾಮೋಹಕ್ಕೆ ನೀರೆರೆದು ಪೋಷಿಸಿದವರು ಅವರೇ. ನಿರಂತರ ಕೆಲಸದ ಒತ್ತಡದೆ ನಡುವೆಯೂ ಇಂತಹ ಲೆಖನಗಳು ಹೊರಬರಲು ಅವರೇ ಪರೊಕ್ಷ ಕಾರಣ.

-:ಆಗುಂತಕನ ಕಾಣದ ಇನ್ನೊಂದು ಮುಖ :-
ನಾನ್ಯಾರು ???
ಮತ್ತೆ ಮತ್ತೆ ಮನದ ಆಳದಲ್ಲಿ ತೂರಿಬರುತ್ತಿರುವ ಒಂದೇ ಪ್ರಶ್ನೆ, ಅಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಈ ಪ್ರಶ್ನೆ ಮೊದಲು ಮಾಡಿದ ನನ್ನ ಆಲೋಚನೆಗಳ ಬಗ್ಗೆ ನನಗೇ ಹಿಡಿದಿಟ್ಟುಕೊಳ್ಳಲಾರದ ಸಂಶಯದ ಬೀಜ ಮೊಳಕೆಯೊಡೆಯುವಂತೆ ಮಾಡಿತು. ಭಾವುಕರ ನಾಡಿನಲ್ಲಿ ಅನಾವಷ್ಯಕವಾಗಿ ನಾನು ಭಾವುಕನಾದೆ ಅನಿಸುತ್ತಿತ್ತು. ನನ್ನಷ್ಟಕ್ಕೆ ನಾನೇ ತುಲನಾತ್ಮಕವಾಗಿ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡಿದೆ.

ನಾನು ಬರುವುದಕ್ಕಿಂತ ಮುಂಚೆ ನಿಮ್ಮ ಸ್ಥಿತಿಯನ್ನು ಒಮ್ಮೆ ಆತ್ಮಾವಲೋಕನ ಮಾಡೊಕೊಳ್ಳೀ: ಶತಕೋಟಿಗಟ್ಟಲೇ ಜನಸಂಖ್ಯೆ, ಅದರಲ್ಲಿ ಕೊಟ್ಯಾನುಗಟ್ಟಲೇ ಬಿಸಿರಕ್ತದ ಪ್ರತಿಭಾವಂತ ಯುವಶಕ್ತಿ, ಕಾಡ್ಗಲ್ಲು ಕೊಟ್ಟರೆ ಮರುದಿನವೇ ಶಿಲೆ ಮಾಡಿ ನಿಲ್ಲಿಸುವ ಪಾಂಡಿತ್ಯ ಮತ್ತು ಅದಕ್ಕೇ ಜೀವಬರಿಸುವ ಉತ್ಸಾಹ .ಇಂತವರು ಬ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ರಾಜಕೀಯ ಶಕ್ತಿಗಳಿಂದಾಗಿ ಕೆಲಸವಿಲ್ಲದೇ ಬೀದಿ ಬೀದಿ ಅಲೆಯುತ್ತಿದ್ದರು. ವಿಶ್ವ ವಿದ್ಯಾನಿಲಯಗಳೆಂದರೆ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಿದ್ದಂತೆ ಎಂದು ಜನ ಆಡಿಕೊಳ್ಳುತ್ತಿದ್ದರು. ಶಿಕ್ಷಣದ ವ್ಯವಸ್ಥೆಯ ಮೇಲೆ ರ್‍ಒಸೆದ್ದು ಹೋಗಿ ನಂಬಿಕೆ ಕಳೆದು ಕೊಂಡಿದ್ದರು. ಇವರನ್ನಾಳುವ ಡೊಂಕು ಬಾಲದ ನಾಯಕರೋ ಇಂತಹ ಯಾರಿಗೂ ಕೈಗೆಟುಕದ ಮಾನವ ಸಂಪನ್ಮೂಲವನ್ನು ಇಟ್ಟುಕೊಂಡು ಜಗತ್ತಿಗೇ ಮಾದರಿಯಾಗುವ ದೇಶಕಟ್ಟಬಹುದಾಗಿತ್ತು. ನಮ್ಮಷ್ಟು ಹಪಾಹಪಿಯಿದ್ದಿದ್ದರೆ ನಮ್ಮನ್ನೂ ಸೇರಿದಂತೆ ಜಗತ್ತನ್ನೇ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬಹುದಾಗಿತ್ತು. ಆದರೆ ಇವರಿಗೇ ಜನಸಂಖ್ಯೆಯೇ ಸಮಸ್ಯೆಯಾಗಿದೆ. ಯಾವುದು ವರದಾನವಾಗಬೇಕಿತ್ತೋ ಅದು ಶಾಪವಾಗಿ ಮಾರ್ಪಟ್ಟಿತ್ತು. ಭಾರತ ದೇಶವೆಂದರೆ ಏಡಿಗಳ ಕಥೆಗೆ ಹೆಸರುವಾಸಿ ಈ ಕಥೆಯ ಮೂಲಕ ನಮ್ಮ ದೇಶದಲ್ಲಿ ಈಗಲೂ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ ಹಾಗೆಯೇ ಇನ್ನೊಂದು ನಿಮಗಿದ್ದ ಬಿರುದೆಂದರೆ ಅದು "ಹಾವಡಿಗರ ನಾಡು".

ಅಂದೊಂದು ಕಾಲವಿತ್ತು ನೀವು ಯಾವುದಾದರೂ ಊರಿಗೆ ಹೋಗುವಾಗ ಬಟ್ಟೆಗೆ ಇಸ್ತ್ರೀ ಮಾಡಿಸಿಕೊಳ್ಳಲು, ಮೂಗಿನ ಸಿಂಬಳ ಒರಿಸಿಕೊಳ್ಳಲು ಕರ್ಚೀಫು, ಎಲ್ಲದಕ್ಕೂ ಅಪ್ಪನ ಜೇಬಿನ ದುಡ್ಡೇ ನೆಚ್ಚಿಕೊಂಡಿರಬೇಕಾಗಿತ್ತು. ಸ್ವಾವಲಂಬನೆ ಯೆಂದರೆ ಏನು ಎನ್ನುವಷ್ಟರ ಮಟ್ಟಿಗೆ ಜಡವೆದ್ದು ಹೋಗಿದ್ದರು ಭಾರತ ಮಾತೆಯ ಒಡಲ ಪುತ್ರರು. ಇನ್ನು ಉದ್ಯೋಗಗಳೋ ಹಬ್ಬಕ್ಕೆ ಬರುವ ಅತಿಥಿ ಗಳಂತೆ ಇದ್ದವು ಈ ಸಾರಿಯ ನಾಗರ ಪಂಚಮಿಗೆ ಬಂದರೆ ಮುಂದೆ ದೀಪಾವಳಿಗೆ. ಜನಸಂಖ್ಯೆ ಮಾತ್ರ ಕ್ಷಣ ಕ್ಷಣಕ್ಕೂ ಸ್ಫೊಟಿಸುತ್ತಿತ್ತು. ಎಷ್ಟಾದರೂ ಮಳೆಯಿಲ್ಲದ ಬೆಳೆ ಅಲ್ಲವೇ ಅದಕ್ಕೇ ಜೋರಾಗೇ ಬೆಳೆ ತೆಗೀತಾಯಿದ್ದೀರಿ, ಮುಂದಾಲೋಚನೆ ಮಾತ್ರ ಶೂನ್ಯ. ಒಂದು ಕೆಲಸಕ್ಕೆ ಕರೆದರೆ ಚೆಲ್ಲಿದ ಸಕ್ಕರೆ ತುಣುಕಿಗೆ ಹಸಿದ ಇರುವೆಗಳು ಮುತ್ತಿಕೊಂಡ ಹಾಗೆ ಮುತ್ತಿಕೊಳ್ಳುತ್ತಿದ್ದಿರಿ, ಆದರೆ ಆಯ್ಕೆಗೆ ಮಾನದಂಡ ನಿಮಗೇ ಗೊತ್ತು. ನಿರುದ್ಯೋಗಿಯ ಬವಣೆಗಳನ್ನು ನೀವೂ ನೋಡಿದ್ದೀರಿ ನಿಮ್ಮ ಚಲನಚಿತ್ರಗಳೂ ಮನಮುಟ್ಟೂವಂತೆ ಇಂಚಿಂಚಾಗಿ ವಿವರಿಸಿವೆ ನಾನು ಮತ್ತೆ ಹೇಳಿ ನಿಮಗೆ ಅವಮಾನ ಮಾಡುವುದಿಲ್ಲ. ಯಾವತ್ತಾದರೂ ಒಂದು ದಿನ ಹೋಟೇಲಿಗೆ ಹೋಗಿ ಮಸಾಲೆ ದೋಸೆ ತಿಂದು ಬಂದರೆ ಎರಡು ದಿನ ಕೈ ತೊಳೆಯದೇ ರುಚಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದಿರಿ, ಇನ್ನೊಮ್ಮೆ ಹೋಗುವುದು ಅಪ್ಪನ ವಾರ್ಷಿಕ ಬೋನಸ್ ಬಂದಾಗ. ರೈತರ ಮಕ್ಕಳಿಗಂತೂ ಅದರ ರುಚಿ ಬ್ರಹ್ಮಾಂಡ ದಷ್ಟು ದೂರವಾಗಿತ್ತು.

ನನ್ನ ಆಗಮನದ ನಂತರ ನಿಮ್ಮ ಪರೀಸ್ಥಿತಿಯನ್ನು ಒಮ್ಮೆ ಮೆಲುಕುಹಾಕಿ: "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಇದು ನಮ್ಮ ದೇಶದ ಧ್ಯೇಯ ಇದನ್ನೇ ನಾನು ಬಂದ ಮೇಲೆ ಇಲ್ಲಿ ಬಿಟ್ಟೂ ಬಿಡದೇ ಸಾರುತ್ತಿದ್ದೇನೆ. ಜಾತಿವ್ಯವಸ್ಥೆಯೆಂಬ ನಿರಂತರ ಗಬ್ಬೆದ್ದಿರುವ ಕೆಸರಿನಲ್ಲಿ ಬಿದ್ದು ಹೊರಳಾಡಿ ನೀವು ಗಬ್ಬೆದ್ದು ಹೋಗಿದ್ದಿರಿ. ನಿಮಗೊಂದು ಸುವಾಸನೆಯ ಮಲ್ಲಿಗೆ ಪರಿಮಳ ಹೇಗಿರುತ್ತದೆ ಎಂದು ಪರಿಚಯಿಸಿದವನೇ ನಾನು. ಸಂಪ್ರದಾಯದ ಸೆರಗಿನಲ್ಲಿ ಸಿಕ್ಕು ಹೊಸತನಕ್ಕೆ ಹೊಂದಿಕೊಳ್ಳದೇ, ಹೊರಬರಲಾರದೇ ಉಸಿರುಗಟ್ಟಿದ್ದ ನಿಮ್ಮ ಮನಸ್ಸುಗಳಿಗೆ ಬದಲಾವಣೆಯ ಗಾಳಿ ಹರಿದುಬರುವಂತೆ ಮಾಡಿದ್ದೇ ನಾನು. ಜಿಡ್ಡುಗಟ್ಟಿದ್ದ ಅರ್ಥ ವ್ಯವಸ್ಥೆಗೆ ಹೊಸ ಆದಾಯದ ಮೂಲ ವನ್ನು ಹುಡುಕಿಕೊಟ್ಟು, ನಿಮ್ಮ ದೇಶಕ್ಕೆ ವಿಶ್ವದಲ್ಲಿ ಒಂದು ಗತ್ತು ತಂದು ಕೊಟ್ಟಿದ್ದೂ ನಾನೇ. ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ, ಜೀವನಕ್ಕೆ ಪ್ರತಿಭೆಯೊಂದೇ ಮಾನದಂಡ, ಹಣವಲ್ಲ ಎಂದುತೋರಿಸಿಕೊಟ್ಟವನೂ ನಾನೇ.. ಕೆಳ/ಮಧ್ಯಮವರ್ಗದ ಮನೆಗಳಲ್ಲಿ ಸರಿಯಾಗಿ ನೂರರ ನೋಟನ್ನೂ ನೋಡಿರಲಿಲ್ಲ ಅವರಿಗೆ ಡಾಲರ್ ನ ಮುಖ ತೋರಿಸಿದವನೂ ನಾನೇ. ಬಾನಂಗಳದಲ್ಲಿ ಲೋಹದ ಹಕ್ಕಿಯೊಂದು ಹಾರಾಡುತ್ತಿದ್ದರೆ ಗೋಣು ಉಳುಕುವವರೆಗೂ ಮೇಲೆ ನೋಡಿತ್ತಿದ್ದಿರಿ, ನೀವೂ ಹತ್ತುವ ಅವ್ಯಕ್ತ ಆಸೆಯನ್ನು ಮನದೊಳಗೆ ಹುದುಗಿಟ್ಟುಕೊಳ್ಳುತ್ತಿದ್ದಿರಿ, ನಿಮ್ಮ ಗಗನ ಕುಸುಮವಾಗಿದ್ದ ಆಸೆಯೊಂದು ಕೈಗೆಟುಕುವಂತೆ ಆಗಿದ್ದು ನನ್ನಿಂದಲೇ..

ಈಗ ನನ್ನ ಮೇಲಿರುವ ಆಪಾದನೆಗಳ ಬಗ್ಗೆ ನನ್ನ ಸ್ಪಷ್ಟೀಕರಣದತ್ತ ಗಮನ ಹರಿಸಿ:
ಅದೇನೋ ಪ್ರತಿಭಾ ಪಲಾಯನದ ಬಗ್ಗೆ ಹೆಳುತ್ತೀರ, ಮೊದಲಿಗೆ ನೀವೇನು ನಿರುಪದ್ರವಿಗಳು ಎಂದು ಬಿಟ್ಟಿದ್ದಿರೋ ಅವರನ್ನೇ ನಾನು ನನ್ನ ದೇಶಕ್ಕೆ ಕರೆದುಕೊಂಡು ಹೊಗಿದ್ದು. ನೀವು ಕೊರಡು ಎಂದು ತೆಗಳಿದವರನ್ನು ನಾವು ತೇಯ್ದು ಗಂಧವನ್ನಾಗಿ ಮಾಡಿದ್ದೇವೆ, ಆ ಮೂಲಕ ಜಗತ್ತಿಗೆ ಅವರ ಸೇವೆ ದೊರೆಯುವಂತೆ ಮಾಡಿದ್ದೇವೆ. ತದನಂತರ ನಮ್ಮ ಪ್ರತಿಭಾ ಪುರಸ್ಕಾರವನ್ನು ಮೆಚ್ಚಿ, ಹೆಚ್ಚು ಹೆಚ್ಚು ಪ್ರತಿಭೆಗಳು ಬರಲಾರಂಭಿಸಿದವು. ನಿಮ್ಮ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸದೇ ಈಗ ನಮ್ಮ ಮೇಲೆ ಗೂಬೆ ಕೂರಿಸುವುದು ಯಾವ ನ್ಯಾಯ ?. ಇನ್ನು ನಿಮ್ಮ ದೇಶದಲ್ಲಿ ನನ್ನ ಒಡಲ ಕುಡಿಗಳ ಬಗ್ಗೆ ಹೇಳಬೇಕೆಂದರೆ, ಅಲ್ಲ ಸ್ವಾಮಿ ನಾವೆನೂ ಪುಕ್ಕಟೆಯಾಗಿ ನಿಮ್ಮ ಪ್ರತಿಭೆಗಳನ್ನು ದುಡಿಸಿಕೊಳ್ಳುತ್ತಿಲ್ಲ, ಅವರವರ ಯೋಗ್ಯತೆಗೆ ತಕ್ಕ ಹಾಗೆ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ನಿಮ್ಮದೇ ವ್ಯವಹಾರ ಜ್ನಾನದಲ್ಲಿ ಹೇಳಬೇಕೆಂದರೆ ನಮ್ಮಲ್ಲಿ ಪ್ರತಿಭೆ ಕೊರತೆ ನಿಮ್ಮಿಂದ ಅದು ನೀಗಿದೆ, ನಿಮ್ಮಲ್ಲಿ ಹಣದ ಕೊರತೆ ಇದೆ ನಮ್ಮಿಂದ ಅದು ನೀಗಿದೆ. ನಿಮ್ಮ ದೇಶಕ್ಕೆ ನ್ಯಾಯವಾಗಿ ಎಷ್ಟು ಟ್ಯಾಕ್ಸ್ ಕಟ್ಟಬೇಕೋ ನಯಾಪೈಸೆ ಬಿಡದೇ ಚಾಚೂ ತಪ್ಪದೇ ಕಟ್ಟಿದ್ದೇವೆ. ಅದು ಸರಿಯಾಗಿ ಬಳಕೆ ಯಾಗದಿದ್ದರೆ ಅದು ನಿಮ್ಮ ಆಡಳಿತಾತ್ಮಕ ವ್ಯವಸ್ಥೆಯ ತಪ್ಪೇ ವಿನಹ ನಮ್ಮದಲ್ಲ.

ಇನ್ನು ಅದೇನೋ ನಮ್ಮನ್ನ ಬರಮಾಡಿಕೊಂಡು ತಾವೆನೋ ಕುಲಗೆಟ್ಟು ಹೋಗಿದ್ದೀರಂತೆ ...ನಿಮ್ಮ ಕುಲವೇಕೆ ಇಷ್ಟು ಕ(ಕೆ)ಡೆಯಾಯ್ತು ಕುಲಬಾಂಧವರೆ ?
ನಿಮ್ಮ ಕುಲದ ಗೌರವದ ಬಗ್ಗೆ ನಮಗೆ ಗೊತ್ತಿಲ್ಲವೇ ? ಶತ ಶತ ಮಾನಗಳಿಂದ ತುಳಿತಕ್ಕೊಳಗಾದವರನ್ನು ತುಳಿಯುತ್ತಲೇ ಬಂದವರು ನೀವು.
ಮಗು ಹುಟ್ಟಿದಾಗ ಪೂರ್ವಜರ ಕುಲ ಕಸುಬನ್ನು ಆಧರಿಸಿ ಬರುವ ಜಾತಿಯನ್ನೇ ಅವನ ಹಣೆ ಮೇಲೆ ಬರೆದು ಅದಕ್ಕೇ ಸೀಮಿತಗೊಳಿಸಿಬಿಟ್ಟಿದ್ದಿರಿ. ಹೊಲೆಯನ ಮಗ ಚಪ್ಪಲಿಯನ್ನೇ ಹೊಲಿಯಬೇಕು, ಮಾಲ್ಜಾತಿಯವರು ಮಾತ್ರ ಆಳಬೇಕು ಎಂದವರು ನೀವು. ನಾನು ಬಂದು ಮಾಡಿದ ಮೊದಲ ಕೆಲಸವೇ ಆ ಜಾತಿಯನ್ನು ಕಿತ್ತೊಗೆದಿದ್ದು ನನ್ನ ಹೆಸರಿನಲ್ಲಿ ದುಡಿಯುವ ಮಕ್ಕಳಲ್ಲಿ ಒಬ್ಬನನ್ನು ನಾನು ಕನಸಿನಲ್ಲೂ ನಿನ್ನ ಜಾತಿ ಯಾವುದೆಂದು ಕೇಳಿಲ್ಲ. ನೀವು ಮನೆಯಲ್ಲಿ ಅತ್ಯಂತ ಕ್ರೂರ ವಾಗಿ ಮಾತನಾಡಿದರೆ ಮನೆಯಲ್ಲಿ ಹಿರಿಯರು ಒಂದು ಮಾತು ಹೇಳುತ್ತಾರೆ, ಅದೇನೆಂದರೆ "ನಾಲಿಗೆ ಜಾತಿ(ಅಥವಾ ಕುಲ) ಹೇಳುತ್ತದೆ". ಬಾಯಿ ಬಿಗಿಹಿಡಿದು ಮಾತನಾಡು. ಅಂದರೆ ಕೆಟ್ಟದ್ದನ್ನು ಮಾತನಾಡುವವನು ಕೆಟ್ಟ ಕುಲದವನು ಎಂದಾಯ್ತು. ಜಾತಿ ಎನ್ನುವುದು ಕುಲ ಕಸುಬಿನಿಂದ ಬಂದಿದ್ದೇ ವಿನಹ, ದೇವರು ಮಾಡಿ ಕಲಿಸಿದ್ದಲ್ಲ. ನಿಮ್ಮ ಎಷ್ಟೋ ವಿದ್ಯಾವಂತ ಮನಸ್ಸುಗಳೆ ಇದನ್ನು ವಿರೋಧಿಸುತ್ತಿವೆ, ಆದರೆ ನಾನು ಯಾವುದಕ್ಕೂ ಸೊಪ್ಪು ಹಾಕಿಲ್ಲ,ನನದೊಂದೇ ಮಂತ್ರ.
ಅದು:
ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು,
ಸುಡುವಾಗ್ನಿಯೊಂದಿರುತಿರಲು ನಡುವೆ
ಕುಲಗೋತ್ರ ಎತ್ತಣದು ಸರ್ವಜ್ನ

ನನ್ನ ಮೇಲಿರುವ ಇನ್ನೊಂದು ದೊಡ್ಡ ಆಪಾದನೆ ನಾನು ಧರ್ಮಾವಶೇಷನೆಗೆ ಬಂದಿದ್ದೇನೆ ಎನ್ನುವುದು ಇದೊಂದು ಕಳಂಕ ಮಾತ್ರ ನನ್ನನ್ನು ತುಂಬಾ ಅಧೀರನ್ನನ್ನಾಗಿ ಮಾಡಿತು. ನಾನು ಬಂದ ಮೇಲೆ ನಿಮ್ಮ ದೇಶದ ಬೆಳವಣಿಗೆಗಳನ್ನೊಮ್ಮೆ ಗಮನಿಸಿ.
ಎರಡೂ ಮೂರು ಡಿಗ್ರೀ ತೆಗೆದುಕೊಂಡವರೂ ಒಂದು ಕೆಲಸಕ್ಕೆ ಅಲೆದೂ ಅಲೆದೂ ಮಂಡಿಯ ಚಿಪ್ಪುಗಳು ಸವೆದು ಹೋಗುತ್ತಿದ್ದವು, ನಾನು ಬಂದ ಮೇಲೆ ಅವರವರ ಪ್ರತಿಭೆಗನುಗುಣವಾಗಿ ಅವರಿದ್ದಲ್ಲಿಗೇ ಹೊಗಿ, ಕೆಲಸಕ್ಕೆ ಕರೆ ಕೊಟ್ಟು, ಕೈ ತುಂಬ ಸಂಬಳ ಕೊಡುವ ಭರವಸೆ ಕೊಟ್ಟು ಬಂದಿದ್ದೇನೆ.
ಒಂದು ಅಂದಾಜಿನ ಪ್ರಕಾರ ನನ್ನ ಕೆಲಸವನ್ನು ನೆಚ್ಚಿಕೊಂಡವರು ಸುಮಾರು ೧ ಕೋಟಿ ಜನ ಪ್ರತ್ಯಕ್ಷ ಫಲಾನುಭವಿಗಳು ಮತ್ತು ೧ ಕೋಟಿ ಪರೋಕ್ಷ ಫಲಾನುಭವಿಗಳಿದ್ದಾರೆ. ಹುಟ್ಟಿಸುವುದೊಂದೇ ಆಜನ್ಮ ಸಿದ್ದ ಹಕ್ಕು ಎಂದು ತಿಳಿದಿದ್ದಿರಿ ಅವರಿಗೆ ನನ್ನ ಕೈಲಾದ ಮಟ್ಟಿಗೆ ಸೂರು ಕೊಡುವದಕ್ಕೆ ನಾನು ಸಹಾಯ ಮಾಡಿದ್ದೇನೆ.
ಮಿಲಿಯನ್ ಗಟ್ಟಲೇ ವಾರ್ಷಿಕ ವರಮಾನ ಐ.ಟಿ ಯಿಂದಲೇ ನಿಮ್ಮ ದೇಶಕ್ಕೆ ಬರುತ್ತಿದೆ.

ನನ್ನ ಪ್ರಕಾರ ಮನುಷ್ಯನು ಬದುಕಬೇಕೆಂದರೆ ಹಸಿದಾಗ ಹೊಟ್ಟೆಗೆ ಅನ್ನ, ಬಾಯಾರಿದಾಗ ಕುಡಿಯಲು ನೀರು, ಬದುಕು ಸಾಕೆನಿಸಿದಾಗ ನಾಲ್ಕು ಸಾಂತ್ವನದ ನುಡಿಗಳು ಬೇಕು, ನೀವು ಬಹುವಾಗಿ ಮೆಚ್ಚುವ ಯಾವ ಧರ್ಮ ನೀವು ಹಸಿದಾಗ ನಿಮಗೆ ಅನ್ನ ನೀರು ಕೊಟ್ಟಿತು ?
ನಾನು ನಮ್ಮವರ ಕೆಲಸವನ್ನು ಪುರಸ್ಕರಿಸುತ್ತಿಲ್ಲ ಆದರೆ ನಿಮ್ಮವರ ಧರ್ಮದ ಬಗ್ಗೆ ಇರುವ ಬೇಜಾವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದ್ದೇನೆ.
ಹೆಜ್ಜೆ ಹೆಜ್ಜೆಗೂ ಮಠ ಮಾನ್ಯಗಳು, ಅಷ್ಟೊಂದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ ಯಾರಾದರೂ ಒಬ್ಬರು, ಒಬ್ಬ ಬಡ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಕೊಡುವ ಔದಾರ್ಯ ತೋರುತ್ತಿವೆಯೇ ? ಅಲ್ಲಿಯೂ ಸಹ ನಾವು ವಿದ್ಯೆಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬೇಕಾಗಿದೆ.
ನಿಮ್ಮ ಯಾವ ಮಠ, ಮಾನ್ಯ, ಮಂದಿರ, ಆಶ್ರಮ ಗಳು ಇಂದು ನಿಮ್ಮ ಧರ್ಮದ ಪ್ರಚಾರಕ್ಕಾಗಿ/ತಿಳುವಳಿಕೆಗಾಗಿ/ಉಳಿವಿಗಾಗಿ ಹೋರಾಡುತ್ತಿವೆ
ಒಂದು ಧರ್ಮದ ಮೇಲಿನ ಅನಾದರವೇ ಇನ್ನೊಂದು ಧರ್ಮದೆ ಬಗ್ಗೆ ಆಸಕ್ತಿ ಹುಟ್ಟಿಸುತ್ತದೆ.ಅವರು ನಿಮ್ಮ ಧರ್ಮದ ಮೇಲೆ ಆಸಕ್ತಿ ಕಳೆದುಕೊಳ್ಳುವ ಹಾಗೆ ನೀವು ನಡೆದುಕೊಂದಿದ್ದೀರಿ ಎಂದಾಯಿತಲ್ಲವೇ ? ಕಾಲಾತೀತ ವ್ಯಕ್ತಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೇ ತಮ್ಮ ಕೊನೆಯ ದಿನಗಳಲ್ಲಿ ಬೇರೆಡೆಗೆ ಸೆಳೆತಕ್ಕೊಳಗಾದರು ಎಂದರೆ ಏನು ಕಾರಣ ? ಆಗೆಲ್ಲಿ ನನ್ನ ಸೊಲ್ಲಿತ್ತು ?
ಬೇಡವೆನಿಸಿದರೂ ನಿಮಗೊಂದು ನಗ್ನ ಸತ್ಯ ಹೇಳುತ್ತೇನೆ ತುಳಿತಕ್ಕೊಳಗಾದವರನ್ನು, ದೀನರು, ದಲಿತರನ್ನು ನೀವು ಎಂದಾದರೂ ಸಮಾನ ದೃಷ್ಟಿಯಿಂದ ನೊಡಿದ್ದರೆ ಈ ಪ್ರಸಂಗವೇ ಉದಯಿಸುತ್ತಿರಲಿಲ್ಲ, ಎಲ್ಲಿಯವರೆಗೂ ನೀವು ಅವರನ್ನು ಸಮಾನರಂತೆ ಕಾಣುವುದಿಲ್ಲವೋ ಅಲ್ಲಿಯವರೆಗೂ ನಿಮಗೆ ಈ ಪಿಡುಗು ತಪ್ಪಿದ್ದಲ್ಲ, ಮತ್ತು ಇದಕ್ಕೆ ನಾನೇ ಬರಬೇಕೇಂದೇನಿಲ್ಲ.

ಪ್ರತಿಯೊಂದು ವ್ಯವಸ್ಥೆಗೂ ತನ್ನದೇ ಆದ ಒಳ್ಳೆಯ/ಕೆಟ್ಟ ಮಗ್ಗಲುಗಳಿರುತ್ತವೆ, ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿರಲು ಪ್ರಯತ್ನಿಸಬೇಕು. ಒಂದು ಆನೆ ನಮಗೆ ದಕ್ಕುತ್ತದೆ ಎನ್ನುವುದಾದರೆ, ದಾರಿಯಲ್ಲಿ ಬರುವಾಗ ಒಂದು ಇರುವೆ ಸತ್ತರೆ ನಾವದನ್ನು ಸಹಿಸಿಕೊಳ್ಳಬೇಕು. ಇಲ್ಲವಾದರೆ ನಮಗೆ ಆನೆಯ ಕೆಲಸದ ಉಪಯೋಗ ಸಿಗುವುದಿಲ್ಲ. ಆನೆ ಹೊರುವ ಭಾರವೇ ಬೇರೆ ಇರುವೆ ಹೊರುವ ಭಾರವೇ ಬೇರೆ.

ಮಾತು ಮಾತಿಗೆ ಅಷ್ಟೊಂದು ಆಳವಾದ ಬೇರುಗಳಿನ್ನೊಟ್ಟುಕೊಂಡಿದ್ದೇವೆ ಎನ್ನುವವರು, ನನ್ನ ಒಂದು ಆಗಮನಕ್ಕೆ ಇಷ್ಟೊಂದು ರೋದಿಸುತ್ತಿರುವುದು ಹಸ್ಯಾಸ್ಪದವೆನಿಸುತ್ತಿದೆ.ಹೊಸತನಕ್ಕೆ ಹೊಂದಿಕೊಳ್ಳದಿರುವ ಕುಬ್ಜ ಮನಸುಗಳು ಮಾಡುವ ಹೇಯ ಆಪಾದನೆಗಳಿವು.

ಮತ್ತು ನನ್ನ ಸದ್ಯದ ಹೆಸರು: "ಸಾಫ್ಟ್ ವೇರ್ ಇಂಜಿನಿಯರ್"
ನನ್ನ ದೇಶ: ಅಮೇರಿಕ

ಮಾನಸವಾಣಿಯಿಂದ,
-ಚಂದ್ರು







2 comments:

  1. ಆಗುಂತಕ,

    ಜಾಗತೀಕರಣದ ಪರ/ವಿರೋಧ ಲೇಖನಗಳು ನಿನ್ನ ಮನಸ್ಸಿನ ವಿಚಾರವನ್ನು ಸೂಸುತ್ತವೆ... ಒಂಡೆದೆ, ಜಾಗತೀಕರಣದ ಫಲಾನುಭವಿಯಾಗಿ ಅದರ ಸವಲತ್ತುಗಳನ್ನು ಆಸ್ವಾದಿಸಬೇಕೆಂದು ಮನಸ್ಸು ಹಾತೊರೆಯುತ್ತಿದ್ದರೆ, ಅದೇ ಜಾಗತೀಕರಣದಿಂದ ಕೆಲವೊಂದು ಮೌಲ್ಯಗಳು ನಶಿಸುತ್ತಿವೆ ಎಂದು ದುಃಖಿಸುತ್ತಿರುವ ಮನಸ್ಸು ಮತ್ತೊಂದೆಡೆ... ಒಂದೇ ವಿಚಾರದ ಬಗ್ಗೆ ಪರೆ/ವಿರೋಧ ಯೋಚನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ.. ಅದರಲ್ಲೂ ತನ್ನ ಒಳಿತಿಗಿಂತ ದೇಶದ ಒಳಿತು / ಪರರ ಒಳಿತು ಮೊದಲು ಎಂದು ತಿಳಿದಿರುವ ನಿನ್ನಂತ ಯುವಕರಲ್ಲಿ ಸಾಮಾನ್ಯ... ಆದರೆ ಸಧ್ಯಕ್ಕೆ ನಮ್ಮ ದೇಶಕ್ಕೆ (ಹಾಗು ನಮಗೂ) ಬೇಕಾಗಿರುವುದು ಆರ್ಥಿಕ ಸುಧಾರಣೆ ಹಾಗು ಜೀವನ ಮೌಲ್ಯಗಳ ಉಳಿವಿಕೆ... ಆರ್ಥಿಕ ಸುಧಾರಣೆ ಜಾಗತೀಕರಣದ ಕೈಲಿದ್ದರೆ, ಮೌಲ್ಯಗಳ ಉಳಿವಿಕೆ ನಮ್ಮ ಕೈಲಿದೆ... ನಮ್ಮಿಂದ ಎನಾಗುತ್ತೋ ಅದನ್ನ ಉಳಿಸಿಕೊಳ್ಳೋಣ ....

    ReplyDelete
  2. ಜಾಗತೀಕರಣದ ಪರ/ವಿರೋಧ ಲೇಖನಗಳು ನಿನ್ನ ಮನಸ್ಸಿನ ವಿಚಾರವನ್ನು ಸೂಸುತ್ತವೆ... ಒಂಡೆದೆ, ಜಾಗತೀಕರಣದ ಫಲಾನುಭವಿಯಾಗಿ ಅದರ ಸವಲತ್ತುಗಳನ್ನು ಆಸ್ವಾದಿಸಬೇಕೆಂದು ಮನಸ್ಸು ಹಾತೊರೆಯುತ್ತಿದ್ದರೆ, ಅದೇ ಜಾಗತೀಕರಣದಿಂದ ಕೆಲವೊಂದು ಮೌಲ್ಯಗಳು ನಶಿಸುತ್ತಿವೆ ಎಂದು ದುಃಖಿಸುತ್ತಿರುವ ಮನಸ್ಸು ಮತ್ತೊಂದೆಡೆ... ಒಂದೇ ವಿಚಾರದ ಬಗ್ಗೆ ಪರೆ/ವಿರೋಧ ಯೋಚನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ.. ಅದರಲ್ಲೂ ತನ್ನ ಒಳಿತಿಗಿಂತ ದೇಶದ ಒಳಿತು / ಪರರ ಒಳಿತು ಮೊದಲು ಎಂದು ತಿಳಿದಿರುವ ನಿನ್ನಂತ ಯುವಕರಲ್ಲಿ ಸಾಮಾನ್ಯ... ಆದರೆ ಸಧ್ಯಕ್ಕೆ ನಮ್ಮ ದೇಶಕ್ಕೆ (ಹಾಗು ನಮಗೂ) ಬೇಕಾಗಿರುವುದು ಆರ್ಥಿಕ ಸುಧಾರಣೆ ಹಾಗು ಜೀವನ ಮೌಲ್ಯಗಳ ಉಳಿವಿಕೆ... ಆರ್ಥಿಕ ಸುಧಾರಣೆ ಜಾಗತೀಕರಣದ ಕೈಲಿದ್ದರೆ, ಮೌಲ್ಯಗಳ ಉಳಿವಿಕೆ ನಮ್ಮ ಕೈಲಿದೆ... ನಮ್ಮಿಂದ ಎನಾಗುತ್ತೋ ಅದನ್ನ ಉಳಿಸಿಕೊಳ್ಳೋಣ ....Panduan Cara Menginstall Windows 7 dengan Flashdisಜಾಗತೀಕರಣದ ಪರ/ವಿರೋಧ ಲೇಖನಗಳು ನಿನ್ನ ಮನಸ್ಸಿನ ವಿಚಾರವನ್ನು ಸೂಸುತ್ತವೆ... ಒಂಡೆದೆ, ಜಾಗತೀಕರಣದ ಫಲಾನುಭವಿಯಾಗಿ ಅದರ ಸವಲತ್ತುಗಳನ್ನು ಆಸ್ವಾದಿಸಬೇಕೆಂದು ಮನಸ್ಸು ಹಾತೊರೆಯುತ್ತಿದ್ದರೆ, ಅದೇ ಜಾಗತೀಕರಣದಿಂದ ಕೆಲವೊಂದು ಮೌಲ್ಯಗಳು ನಶಿಸುತ್ತಿವೆ ಎಂದು ದುಃಖಿಸುತ್ತಿರುವ ಮನಸ್ಸು ಮತ್ತೊಂದೆಡೆ... ಒಂದೇ ವಿಚಾರದ ಬಗ್ಗೆ ಪರೆ/ವಿರೋಧ ಯೋಚನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ.. ಅದರಲ್ಲೂ ತನ್ನ ಒಳಿತಿಗಿಂತ ದೇಶದ ಒಳಿತು / ಪರರ ಒಳಿತು ಮೊದಲು ಎಂದು ತಿಳಿದಿರುವ ನಿನ್ನಂತ ಯುವಕರಲ್ಲಿ ಸಾಮಾನ್ಯ... ಆದರೆ ಸಧ್ಯಕ್ಕೆ ನಮ್ಮ ದೇಶಕ್ಕೆ (ಹಾಗು ನಮಗೂ) ಬೇಕಾಗಿರುವುದು ಆರ್ಥಿಕ ಸುಧಾರಣೆ ಹಾಗು ಜೀವನ ಮೌಲ್ಯಗಳ ಉಳಿವಿಕೆ... ಆರ್ಥಿಕ ಸುಧಾರಣೆ ಜಾಗತೀಕರಣದ ಕೈಲಿದ್ದರೆ, ಮೌಲ್ಯಗಳ ಉಳಿವಿಕೆ ನಮ್ಮ ಕೈಲಿದೆ... ನಮ್ಮಿಂದ ಎನಾಗುತ್ತೋ ಅದನ್ನ ಉಳಿಸಿಕೊಳ್ಳೋಣ ....

    ReplyDelete

sooryasta

sooryasta

Followers